ಮನೆ ರಾಷ್ಟ್ರೀಯ ಕಾಂಗ್ರೆಸ್ ​ನ ಪ್ರಣಾಳಿಕೆ ಓದಿದ್ದು ಸಂತಸದ ಸಂಗತಿ: ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಲೇವಡಿ

ಕಾಂಗ್ರೆಸ್ ​ನ ಪ್ರಣಾಳಿಕೆ ಓದಿದ್ದು ಸಂತಸದ ಸಂಗತಿ: ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಲೇವಡಿ

0

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯನ್ನೇ ಮತ್ತೊಮ್ಮೆ ಓದಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಲೇವಡಿ ಮಾಡಿದ್ದಾರೆ.

Join Our Whatsapp Group

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್ ಪ್ರಣಾಳಿಕೆಯ ಯಥಾವತ್ ಪ್ರಸ್ತುತಿ ಎಂದಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯ ಪುಟ 30ರಲ್ಲಿ ವಿವರಿಸಿರುವ ಉದ್ಯೋಗ-ಸಂಯೋಜಿತ ಪ್ರೋತ್ಸಾಹವನ್ನು (ELI) ಮೋದಿ ಸರ್ಕಾರ ತನ್ನ ಬಜೆಟ್​ನಲ್ಲಿ ವಾಸ್ತವಿಕವಾಗಿ ಅಳವಡಿಸಿಕೊಂಡಿದೆ ಎಂದು ನನಗೆ ಸಂತೋಷವಾಗಿದೆ. ಅವರು ಕಾಂಗ್ರೆಸ್ ಪ್ರಣಾಳಿಕೆಯ ಪುಟ 11ರಲ್ಲಿ ಪ್ರತಿ ಅಪ್ರೆಂಟಿಸ್‌ಗೆ ಭತ್ಯೆಯೊಂದಿಗೆ ಅಪ್ರೆಂಟಿಸ್‌ಶಿಪ್ ಯೋಜನೆಯನ್ನು ಪರಿಚಯಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯ ಇತರೆ ವಿಚಾರಗಳನ್ನೇ ನಿರ್ಮಲಾ ಸೀತಾರಾಮನ್ ನಕಲು ಮಾಡಿದ್ದಾರೆ ಎಂದು ಹೇಳಲು ನಾನು ಬಯಸುತ್ತೇನೆ. ಉಳಿದ ಮಾಹಿತಿಯನ್ನು ನಾನು ಶೀಘ್ರದಲ್ಲೇ ಪಟ್ಟಿ ಮಾಡುತ್ತೇನೆ ಎಂದು ಪಿ. ಚಿದಂಬರಂ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತೇಂದ್ರ (ಜಿತು) ಪಟ್ವಾರಿ ಕೂಡ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಮೋದಿ ಸರ್ಕಾರ 2 ಕೋಟಿ ಉದ್ಯೋಗಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ನರೇಂದ್ರ ಮೋದಿ ಸರ್ಕಾರವು “ಡಬಲ್ ಇಂಜಿನ್” ಬದಲಿಗೆ “ಡಬಲ್ ಸುಳ್ಳಿನ ಸರ್ಕಾರ” ಎಂದು ಲೇವಡಿ ಮಾಡಿದ್ದಾರೆ.

2024ರ ಕೇಂದ್ರ ಬಜೆಟ್‌ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ಸಾಮಾನ್ಯ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಬಜೆಟ್​ನಲ್ಲಿ ಏನನ್ನೂ ಹೇಳಲಿಲ್ಲ. MNREGA ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಆದಾಯವನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಾಕಷ್ಟು ಉಲ್ಲೇಖವಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯ ಆದಾಯದ ಅಸಮಾನತೆಯನ್ನು ಪರಿಹರಿಸುವಲ್ಲಿ ಮೋದಿ ಸರ್ಕಾರ ಸೋತಿದೆ.” ಎಂದಿದ್ದಾರೆ.

ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಕೂಡ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಕ್ಯಾನ್ಸರ್ ಅಥವಾ ಇತರ ಜೀವರಕ್ಷಕ ಔಷಧಿಗಳ ಮೇಲೆ ನೀಡಲಾದ ಪರಿಹಾರವು ಶ್ಲಾಘನೀಯವಾಗಿದೆ. ಬಿಹಾರಕ್ಕೆ ಏನು ನೀಡಲಾಗಿದೆಯೋ ಅದು ಉತ್ತಮವಾಗಿದೆ. ಬಿಹಾರ, ಆಂಧ್ರಪ್ರದೇಶವನ್ನು ಕೇಂದ್ರೀಕರಿಸಿರುವ ನೀವು ತೆಲಂಗಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಕ್ಕೆ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಬಜೆಟ್ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ರೈತರ ಸಮಸ್ಯೆಗಳನ್ನು ಪರಿಹರಿಸುವವರೆಗೆ ಮತ್ತು ಯುವಕರಿಗೆ ಉದ್ಯೋಗವನ್ನು ಖಾತ್ರಿ ಪಡಿಸುವವರೆಗೆ ಈ ಸರ್ಕಾರದಿಂದ ಜನರಿಗೆ ಪ್ರಯೋಜನವಿಲ್ಲ” ಎಂದು ಹೇಳಿದ್ದಾರೆ.