ಮೈಸೂರು: ಇಂದು ಡಿ .ಬಿ ಕುಪ್ಪೆ ಗ್ರಾಮ ಪಂಚಾಯಿತಿ ಎದುರು ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ(AIJASC) ನೇತೃತ್ವದಲ್ಲಿ ಆದಿವಾಸಿ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪಂಚಾಯಿತಿಯ ನೌಕರ ಮಂಜುಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡರಾದ ಸುನಿಲ್ ಟಿ.ಆರ್, ಹೆಗ್ಗಡದೇವನಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಬಹುತೇಕ ಜನರು ಪರಿಶಿಷ್ಟ ಪಂಗಡ ಹಾಗೂ ಅರಣ್ಯ ಆಧಾರಿತ ಮೂಲ ಬುಡಕಟ್ಟು ಜನಾಂಗವರಾಗಿದ್ದಾರೆ. ಇಲ್ಲಿನದ ಆದಿವಾಸಿ ಜನರು ಜೀವನೋಪಾಯಕ್ಕಾಗಿ ಕೇರಳ ಹಾಗೂ ಕೊಡಗಿನ ಎಸ್ಟೇಟ್ ಗಳಿಗೆ ವಲಸೆ ಹೋಗಿ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಅನಕ್ಷರತೆ ಅಪೌಷ್ಟಿಕತೆ, ಬಡತನ ಹಾಗೂ ಕಾನೂನಿನ ಅರಿವಿಲ್ಲದ ಮುಗ್ಧರಾಗಿದ್ದಾರೆ. ಇವರಿಗೆ ವಾಸಿಸಲು ಯೋಗ್ಯವಾದ ಮನೆ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ, ಇನ್ನಿತರ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಗದೇ ವಂಚಿತರಾಗಿದ್ದಾರೆ. ಸರ್ಕಾರದಿಂದ ಮನೆ ಮಂಜೂರಾದರೂ ಸಹ ಅರಣ್ಯ ಇಲಾಖೆ ಹಕ್ಕು ಪತ್ರದ ನೆಪ ಹೇಳಿ ಕಟ್ಟಲು ಬಿಡುತ್ತಿಲ್ಲ. ಸರ್ಕಾರ ಕೊಡುವ ಪುಡಿಗಾಸಿನ ಹಣದಲ್ಲಿ ಅರ್ಧದಷ್ಟು ಹಣ ಓಡಾಟಕ್ಕೆ ಖರ್ಚಾಗುತ್ತದೆ ಅದಲ್ಲದೆ ಅಡಿಪಾಯ ಹಾಕುವುದರಿಂದ ಮೇಲ್ಚಾವಣಿ ಹಾಕುವವರೆಗೂ ಲಂಚ ಇಲ್ಲದೆ ಒಂದು ಕೆಲಸವೂ ಸಹ ಮುಂದೆ ಹೋಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಮನೆ ಕಟ್ಟಲೇಬೇಕಾದ ಅನಿವಾರ್ಯತೆ ಇರುವ ಮುಗ್ಧ ಜನರ ಅಸಹಾಯಕತೆಯನ್ನು ಬಳಸಿಕೊಂಡು ಅಧಿಕಾರಿಗಳು, ಜನಪ್ರತಿನಿಧಿಗಳು ಲಾಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರವಾಸೋದ್ಯಮ ,ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಪ್ರದೇಶದಲ್ಲಿ ಒಂದೆಡೆ ಗಣಿಗಾರಿಕೆ,ರೆಸಾರ್ಟ್,ಖಾಸಗಿ ಎಸ್ಟೇಟ್ ಗಳಿಗೆ ಪುಡಿಗಾಸಿಗೆ ಗುತ್ತಿಗೆ ನೀಡಿ ಅರಣ್ಯ ನಾಶ ಮಾಡಿ ಕಾರ್ಪೊರೇಟ್ ಮನೆತನಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಇತ್ತೀಚಿಗೆ ಕೇಂದ್ರ ಸರ್ಕಾರ ತಂದಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ 2023.ಅರಣ್ಯ ಸಂರಕ್ಷಣಾ ನಿಯಮಾವಳಿ 2022 ನಿಂದಾಗಿ ಅರಣ್ಯನಾಶ,ಹವಾಮಾನ ವೈಪರೀತ್ಯ ಹೆಚ್ಚಲು ಕಾರಣವಾಗುವ ಜನ ವಿರೋಧಿ ಕಾಯ್ದೆಗಳನ್ನು ತಂದಿದ್ದಾರೆ. ಆದರೆ ಮೂಲ ನಿವಾಸಿ ಬುಡಕಟ್ಟು ಜನರ ಸತತ ಹೋರಾಟದಿಂದ ಗಳಿಸಿದ ಹಕ್ಕಾದ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕ ಹಾಗೂ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಗೋಳೂರು ಹಾಡಿಯಲ್ಲಿಯೂ ಸಹ ಸೋಲಾರ್ ದೀಪವನ್ನು ದುರಸ್ತಿ ಮಾಡಲು ಆಗ್ರಹಿಸಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತಿಭಟಿಸಿ ಸಂಭಂದಿಸಿದ ಇಲಾಖೆಗಳ ಗಮನಕ್ಕೆ ತಂದಾಗಲೂ ಸಹ ಗ್ರಾಮ ಪಂಚಾಯಿತಿ, ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ, ತಾಲ್ಲೂಕು ಆಡಳಿತ, ಅರಣ್ಯ ಇಲಾಖೆಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ತಮ್ಮ ಜವಾಬ್ದಾರಿಗಳಿಂದ ಕೈ ತೊಳೆದುಕೊಳ್ಳುತ್ತಿದ್ದಾರೆ ಹೊರತು ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳಲು ಮುಂದಾಗಲಿಲ್ಲ. ಹಾಗಾಗಿ ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಬದುಕಿಗಾಗಿ ಹೋರಾಡುತ್ತಿರುವ ಆದಿವಾಸಿಗಳ ಹಕ್ಕುಗಳನ್ನು ಹಾಗೂ ಈ ಭಾಗದ ಅರಣ್ಯ ವಾಸಿಗಳ ಹಕ್ಕುಗಳನ್ನು ರಕ್ಷಿಸಲು ಅವರ ಈ ಕೆಳಕಂಡ ಹಕ್ಕೋತ್ತಾಯಗಳನ್ನು ಆದ್ಯತೆ ಆಧಾರದ ಮೇಲೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಳೂರು ಹಾಡಿಯ ಗಂಗೆ ,ಗೌರಿ,ಪುಟ್ಟಿ,ಕಾಳಿ ,ಅಶೋಕ, ಮಣಿ,ಬಾವಲಿ ಹಾಡಿಯ ಪೊನ್ನಮ್ಮ,ಕಣ್ಣ,ಮೀನಾಕ್ಷಿ,ಬಳ್ಳೆ ಹಾಡಿಯ ವಾಣಿ.ಮೂಲೆಯೂರು ಹಾಡಿ,ವಡಕನಮಾಳ,ಮಚ್ಚೂರು,ತಿಮ್ಮನ ಹೊಸಳ್ಳಿ ಜನ ಹಾಗೂ ಸಮಿತಿಯ ಜಿಲ್ಲಾ ಮುಖಂಡರಾದ ಸುನಿಲ್ ಸೇರಿದಂತೆ ಭಾಗವಹಿಸಿದ್ದರು.
ಹಕ್ಕೋತ್ತಾಯಗಳು.
* ಗೋಳೂರು ಹಾಡಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮನೆಮನೆಗೆ ನಲ್ಲಿ ವ್ಯವಸ್ಥೆ ಮಾಡಿ. ಅಲ್ಲಿಯವರೆಗೆ ಬೋರ್ ವೆಲ್ (ಕೈ ಪಂಪ್)ನ್ನು ಸರಿಪಡಿಸಿ ಹಾಗೂ ಎರಡು (ಮಿನಿ ಟ್ಯಾಂಕ್ )ತೊಂಬೆಗಳಿಗೂ ಸಹ ನಿರಂತರವಾಗಿ ನೀರು ಸರಬರಾಜು ಮಾಡಿ.
* ಗೋಳೂರು ಹಾಡಿಯಲ್ಲಿ ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ಮನೆ ಹಾಗೂ ಶೌಚಾಲಯ ನಿರ್ಮಿಸಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಹಣ ಬಿಡುಗಡೆ ಮಾಡಿ. ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಅಲ್ಲಿಯವರೆಗೆ ಸೋಲಾರ್ ದೀಪವನ್ನು ಸರಿಪಡಿಸಿ.
* ಡಿ.ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆದಿವಾಸಿ ಹಾಡಿಗಳ ಮನೆಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಿ. ಅಲ್ಲಿಯವರೆಗೆ ಈ ಕೂಡಲೇ ಸಮುದಾಯ ಶೌಚಾಲಯ ಹಾಗೂ ಸ್ನಾನದ ಗೃಹಗಳನ್ನು ನಿರ್ಮಿಸಿ.
* ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆದಿವಾಸಿ ಹಾಡಿಗಳಿಗೂ ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರು, ಮನೆ, ಶೌಚಾಲಯ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ
* ಶಿಥಿಲಾವಸ್ಥೆಯಲ್ಲಿರುವ ಬಳ್ಳೆ, ಗೋಳೂರು ಹಾಗೂ ಆನೆಮಾಳ ಹಾಡಿಗಳ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಿ.
* ಕಳಪೆ ಕಾಮಗಾರಿಯಿಂದಾಗಿ ಸೋರುತ್ತಿರುವ ಬಾವಲಿ ಹಾಡಿ ಅಂಗನವಾಡಿಯನ್ನು ಈ ಕೂಡಲೇ ಸರಿಯಾದ ಗುಣಮಟ್ಟದಲ್ಲಿ ನಿರ್ಮಿಸಿ.ಮಾನಿ ಮೂಲೆ ಹಾಗೂ ಆನೆಮಾಳ ಹಾಡಿಗೆ ಶಾಶ್ವತ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ.
*ನೆರೆ ಸಂತ್ರಸ್ತರು ಹಾಗೂ ಕಾಡು ಪ್ರಾಣಿಗಳ ದಾಳಿಯಿಂದಾಗಿ ತೊಂದರೆಯಾಗಿರುವ ಕುಟುಂಬಗಳಿಗೆ ಈ ಕೂಡಲೇ ಸೂಕ್ತ ಪರಿಹಾರವನ್ನು ಒದಗಿಸಿ.
*ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ವಿತರಿಸಿ.
* ಆದಿವಾಸಿಗಳ ಹಿತಕ್ಕೆ ಮಾರಕವಾದ ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ 2023 ಮತ್ತು ಅರಣ್ಯ ಸಂರಕ್ಷಣಾ ನಿಯಮಾವಳಿ 2022ನ್ನು ರದ್ದುಗೊಳಿಸಿ.ಅರಣ್ಯ ಹಕ್ಕು ಕಾಯ್ದೆ 2006ನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ. ಕಾರ್ಪೊರೇಟ್ ಕಂಪನಿಗಳ ಲಾಭಕ್ಕಾಗಿ ಅರಣ್ಯವನ್ನು ನಾಶಪಡಿಸುವ ನೀತಿಯನ್ನು ಕೈಬಿಡಿ.
ಎಲ್ಲಾ ಆದಿವಾಸಿಗಳಿಗೆ ಅರಣ್ಯ ಭೂಮಿಗಾಗಿ ಹಕ್ಕು ಪತ್ರವನ್ನು ವಿತರಿಸಿ ಹಕ್ಕುಪತ್ರ ವಿತರಿಸಿರುವವರಿಗೆ ವಾಸಿಸಲು ಮನೆ ಹಾಗೂ ಹಿಂದಿನಿಂದಲೂ ಕೃಷಿ ಮಾಡಿಕೊಂಡು ಬರುತ್ತಿದ್ದ ಭೂಮಿಗಳಿಗೂ ಕೃಷಿ ಮಾಡಲು ಅವಕಾಶ ನೀಡಬೇಕು. ಕಾಡು ಪ್ರಾಣಿಗಳು ಹಾಡಿ ಕಡೆಗೆ ಬರದಂತೆ ಸೋಲಾರ್ ಅಥವಾ ರೈಲು ಕಂಬಿಯನ್ನು ನಿರ್ಮಿಸಿ ಸೂಕ್ತ ಭದ್ರತೆ ಒದಗಿಸಬೇಕು.
ಕುಡುಗೋಲು ಕಣ ರಕ್ತಹೀನತೆ ರೋಗಿಗಳಿಗೆ ವಿಶಿಷ್ಟ ಗುರುತಿನ ಚೀಟಿ,ಆಧಾರ್ ಕಾರ್ಡ್,ರೇಷನ್ ಕಾರ್ಡ್, ಜಾತಿ,ಆದಾಯ ಇನ್ನಿತರ ಅಗತ್ಯ ದಾಖಲಾತಿಗಳನ್ನು ಮಾಡಿಸಲು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಶಿಬಿರಗಳನ್ನು ಮಾಡಿ
ಬಾವಲಿ ಹಾಡಿಯ ನೀರು ಸೌಲಭ್ಯ ಇಲ್ಲದ ಐದು ಮನೆಗಳಿಗೆ ಈ ಕೂಡಲೇ ನೀರಿನ ವ್ಯವಸ್ಥೆ ಮಾಡಿ.ಎಲ್ಲಾ ಹಾಡಿಗಳಿಗೂ ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸಿ.
ಮೂಲೆಯೂರು ಹಾಡಿಗೆ ಮನೆ,ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಿ.
ಮಚ್ಚೂರು ಗ್ರಾಮದ ಜಯಮ್ಮ ವೈಫ್ ಆಪ್ ಗೋವಿಂದ ಮನೆಯ ಮೇಲೆ ಮಳೆಯಿಂದಾಗಿ ಮರ ಬಿದ್ದಿದ್ದು ಈ ಕೂಡಲೇ ಸೂಕ್ತ ಪರಿಹಾರವನ್ನು ನೀಡಿ. ಹೊಸ ಮನೆಯನ್ನು ಮಂಜೂರು ಮಾಡಿ.
*ವಡಕನ ಮಾಳ ಗ್ರಾಮದ ಕೃಷ್ಣ, ಶ್ರೀನಿವಾಸ ಸೇರಿದಂತೆ ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ವಿತರಿಸುವಂತೆ ಒತ್ತಾಯಿಸಿದ್ದಾರೆ.