ಮನೆ ರಾಜಕೀಯ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ರಾತ್ರಿ ಧರಣಿ, ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು: ಆರ್.ಅಶೋಕ

ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ರಾತ್ರಿ ಧರಣಿ, ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು: ಆರ್.ಅಶೋಕ

0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ಮಾಡಲಾಗುವುದು. ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.

Join Our Whatsapp Group

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೂಟಿಯಾದ ಹಣ ಮರಳಿ ಸರ್ಕಾರದ ಖಜಾನೆಗೆ ಬರಬೇಕು. ಇದಕ್ಕಾಗಿ ಹಗಲು ರಾತ್ರಿ ಧರಣಿ ಮಾಡಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇವೆ. ರಾತ್ರಿ ಧರಣಿ ಮಾಡುವವರಿಗೆ ಊಟ ಬೇಕಾ ಎಂದು ಸ್ಪೀಕರ್ ಕೇಳಿದ್ದಾರೆ. ಮಾತನಾಡಲು ಅವಕಾಶ ನೀಡದವರ ಊಟ, ದಲಿತರ ಹಣ ಕೊಳ್ಳೆ ಹೊಡೆದವರ ಊಟ ಬೇಡ ಎಂದು ತಿರಸ್ಕಾರ ಮಾಡಿದ್ದೇವೆ. ರಾತ್ರಿ ಪೂರ್ತಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಧರಣಿ ಮಾಡುತ್ತೇವೆ. ನಾಳೆ ಕೂಡ ಧರಣಿ ಮುಂದುವರಿಯಲಿದೆ. ಎರಡೂ ಹಗರಣಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ಮಾಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ದೊಡ್ಡ ಹಗರಣ ನಡೆದಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ 14 ಸೈಟು ಹಾಗೂ ಅವರ ಬೆಂಬಲಿಗರು ನೂರಾರು ಸೈಟು ಕೊಳ್ಳೆ ಹೊಡೆದಿದ್ದಾರೆ. ಮುಡಾದಲ್ಲಿ 1 ಲಕ್ಷಕ್ಕೂ ಅಧಿಕ ಚದರಡಿಯ ಹಾಗೂ 3-4 ಸಾವಿರ ಕೋಟಿ ರೂ. ಬೆಲೆಯ ಪ್ರಮುಖ ನಿವೇಶನಗಳನ್ನು ಲೂಟಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಕಾಯಲಿ ಎಂದು ಜನರು ಅಧಿಕಾರ ಕೊಟ್ಟರೆ ಆ ವ್ಯಕ್ತಿ ಸ್ವಜನಪಕ್ಷಪಾತದಿಂದ ನಿವೇಶನಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಕೂಡ ಮುಖ್ಯಮಂತ್ರಿಯ ಹೆಗಲಿಗೆ ಬರುವ ಲಕ್ಷಣ ಕಂಡುಬಂದಿದೆ. ಮುಡಾದಲ್ಲಿ ದಲಿತರ ಜಮೀನು ಲೂಟಿ ಮಾಡಿದರೆ, ನಿಗಮದಲ್ಲಿ ದಲಿತರ ಹಣ ಲೂಟಿಯಾಗಿದೆ. ಜೊತೆಗೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ತಾವೇನೂ ಅಕ್ರಮ ಮಾಡಿಲ್ಲವೆಂದರೆ ಅಧಿವೇಶನದಲ್ಲಿ ಚರ್ಚಿಸಲು ಭಯ ಏಕೆ? ಇಡೀ ಕಾಂಗ್ರೆಸ್ ತಂಡ ಸದನದಲ್ಲಿ ಉತ್ತರಿಸಲು ಸಾಧ್ಯವಾಗದೆ ಓಡುತ್ತಿದ್ದಾರೆ ಎಂದರು.

ಹಗರಣದ ತನಿಖೆಗೆ ನ್ಯಾಯಮೂರ್ತಿಗಳ ನೇತೃತ್ವದ ತಂಡ ರಚಿಸಲಾಗಿದೆ. ಆದರೆ ಮುಖ್ಯಮಂತ್ರಿಯೇ ತನಿಖೆಗೆ ಆದೇಶ ಮಾಡಿದರೆ ನ್ಯಾಯ ಹೇಗೆ ಸಿಗಲಿದೆ? ಸ್ಪೀಕರ್ ಕೂಡ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಭೋವಿ ನಿಗಮದ ಹಗರಣ ಚರ್ಚಿಸಲು ಅವಕಾಶ ನೀಡುತ್ತಾರೆ, ಆದರೆ ವಾಲ್ಮೀಕಿ ನಿಗಮದ ಹಗರಣ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ನಡೆ ಕೂಡ ಪ್ರಶ್ನಾರ್ಹವಾಗಿದೆ ಎಂದರು.