ಮನೆ ಸುದ್ದಿ ಜಾಲ ಮಳೆ ಹಾನಿ: ಸಂತ್ರಸ್ತರಿಗೆ ಎರಡು ದಿನದೊಳಗೆ ಪರಿಹಾರ ನೀಡಿ; ಜಯರಾಮ್

ಮಳೆ ಹಾನಿ: ಸಂತ್ರಸ್ತರಿಗೆ ಎರಡು ದಿನದೊಳಗೆ ಪರಿಹಾರ ನೀಡಿ; ಜಯರಾಮ್

0

ಮೈಸೂರು (Mysuru)- ಮಳೆಯಿಂದ ಹಾನಿಯುಂಟಾದ ಎರಡು ದಿನದೊಳಗೆ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಜಯರಾಮ್ ತಿಳಿಸಿದರು.
ಇಂದು ಹುಣಸೂರು ಮತ್ತು ಕೆಆರ್ ನಗರ ತಾಲ್ಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಂದ ತಂಬಾಕು ಬೆಳೆ ಹೆಚ್ಚಾಗಿ ಹಾನಿಯಾಗಿದೆ. ಜಂಟಿ ಸಮೀಕ್ಷೆ ಮಾಡಿ ಬೆಳೆ ಹಾನಿಗೆ ಪರಿಹಾರ ನೀಡಲು ಕ್ರಮವಹಿಸಿ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಳೆಹಾನಿ ಸಂತ್ರಸ್ತರಿಗೆ ಬೇಗ ಪರಿಹಾರ ನೀಡಲಾಗಿದೆ. ಆದರೆ ಸಂತ್ರಸ್ತರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಸಂತ್ರಸ್ತರಿಗೆ ಪರಿಹಾರ ದೊರೆತಿರುವ ಕುರಿತು ಪತ್ರದ ಮೂಲಕ ಮಾಹಿತಿ ನೀಡುವಂತೆ ತಹಶೀಲ್ದಾರರುಗಳಿಗೆ ಸೂಚಿಸಿದರು.
ನಗರಪ್ರದೇಶಗಳ ಬಡಾವಣೆಗಳಲ್ಲಿ ಮಳೆ ಸಂದರ್ಭದಲ್ಲಿ ಪ್ರವಾಹ ಉಂಟಾಗುತ್ತದೆ. ಆದ್ದರಿಂದ ಚರಂಡಿ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಡ್ರೈನೇಜ್ ಗಳನ್ನು ಮಾಡಿ, ಮಳೆಹಾನಿ ಉಂಟಾಗಿರುವುದನ್ನು ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಬೆಳೆಹಾನಿ ಅಂಕಿಅಂಶಗಳನ್ನು ಪರಿಶೀಲನೆ ಮಾಡಿ ಇಟ್ಟುಕೊಳ್ಳಬೇಕು. ಪರಿಹಾರ ಸಾಪ್ಟವೇರ್ ಓಪನ್ ಆದ ತಕ್ಷಣ ಅಪ್ಲೋಡ್ ಮಾಡಿ. ಮಳೆಯಿಂದ ಹಾನಿ ಉಂಟಾದವರಿಗೆ 24 ಗಂಟೆಯೊಳಗೆ ಪರಿಹಾರ ನೀಡಬೇಕು. ತಹಶೀಲ್ದಾರರು ದಾಖಲೆಗಳನ್ನು ಫಲಾನುಭವಿಗಳಿಂದ ಪಡೆದು ತಕ್ಷಣ ಪರಿಹಾರ ನೀಡಬೇಕು ಜಿಲ್ಲೆಯಲ್ಲಿ 100 ಗ್ರಾಮಗಳನ್ನು ಅತಿ ಹೆಚ್ಚು ಮಳೆ ಹಾನಿ ಉಂಟಾಗಿ ಪ್ರವಾಹ ಬರುವ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ 34 ಮನೆಗಳು, ಕೆ.ಆರ್. ನಗರ ತಾಲ್ಲೂಕಿನಲ್ಲಿ 14 ಮನೆಗಳು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 3 ಮನೆಗಳು ಮಳೆಯಿಂದ ಪೂರ್ಣ ಹಾನಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 772 ಮನೆಗಳು ಮಳೆಯಿಂದ ಭಾಗಶಃ ಹಾನಿಯಾಗಿದ್ದು, 533 ಮನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಶೇ.166 ರಷ್ಟು ಮಳೆಯಾಗಿದೆ. ಈಗಾಗಲೇ ಶೇ.48 ಬಿತ್ತನೆಯಾಗಿದ್ದು, 251 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ನಗರಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿಳಾದ ಡಾ.ಮಂಜುನಾಥಸ್ವಾಮಿ ಅವರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.