ಮನೆ ಕಾನೂನು ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಫಲಕ: ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಫಲಕ: ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತರಾಟೆ

0

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕುವ ಕುರಿತಂತೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

Join Our Whatsapp Group

ನಗರದಲ್ಲಿ ಅನಧಿಕೃತ ಜಾಹೀರಾತು ಫಲಕ, ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್​ಗಳ ಹಾವಳಿ ತಡೆಯಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಮಾಯಿಗೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಇದೇ ವಿಚಾರ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅನಧಿಕೃತ ಜಾಹೀರಾತು ಫಲಕಗಳ ಕುರಿತಂತೆ ಕಳೆದ ವಿಚಾರಣೆ ಸಂದರ್ಭದಲ್ಲಿ ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನ್ಯಾಯಾಲಯ ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಏಕೆ ಜರುಗಿಸಬಾರದು ಎಂದು ವಿವರಣೆ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತು.

ವಿಚಾರಣೆ ವೇಳೆ ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರು ಸಲ್ಲಿಸಿದ್ದ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ನ್ಯಾಯಾಲಯ ಕೇಳಿದ್ದ ವಿಷಯದ ಬಗ್ಗೆ ಇಡೀ ಪ್ರಮಾಣ ಪತ್ರದಲ್ಲಿ ಒಂದಕ್ಷರವೂ ತಿಳಿಸಿದೆ. ಇಡೀ ಪ್ರಮಾಣಪತ್ರ ನೋಡಿದಾಗ ಎಲ್ಲಿಯೂ ಒಂದು ಪಿಸುಮಾತು ಕಾಣುತ್ತಿಲ್ಲ. ಇದನ್ನೆಲ್ಲ ನ್ಯಾಯಾಲಯ ಸಹಿಸುವುದಿಲ್ಲ. ಬಹಳ ಗಂಭೀರವಾಗಿ ಇದನ್ನು ಪರಿಗಣಿಸಲಾಗುವುದು. ನ್ಯಾಯಾಲಯದ ಆದೇಶಗಳೆಂದರೆ ನಿಮಗೆ ಇಷ್ಟೊಂದು ಕನಿಷ್ಠವೇ ಎಂದು ಪ್ರಶ್ನಿಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು, ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ನೀವು ಅನಧಿಕೃತ ಜಾಹೀರಾತು ಫಲಕಗಳನ್ನು ತೆಗೆಯುವುದಕ್ಕೆ ಕ್ರಮ ಕೈಗೊಳ್ಳುವ ಬದಲು, ಅನಧಿಕೃತ ಜಾಹೀರಾತು ಫಲಕಗಳಿಗೆ ಅನುಮತಿ ನೀಡುವ ಕೆಲಸ ಮಾಡಿದ್ದೀರಿ ಎಂದು ಬಿಬಿಎಂಪಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಕ್ಷಮೆ ಇರಲಿ, ವಿವರವಾದ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದರು.

ಮಧ್ಯಪ್ರವೇಶಿಸಿದ ಸರ್ಕಾರದ ಪರ ವಕೀಲರು, ಅನಧಿಕೃತ ಫ್ಲೆಕ್ಸ್‌ಗಳ ಕುರಿತಂತೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಗರದ ಪ್ರತಿ ವಲಯದಲ್ಲಿ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ದೂರು ಬಂದರೆ, ಎಫ್‌ಐಆರ್ ದಾಖಲಿಸಿಕೊಳ್ಳಲಾಗುತ್ತದೆ. ಕಳೆದ ಒಂದು ತಿಂಗಳಲ್ಲಿ 230 ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಅನಧಿಕೃತ ಜಾಹೀರಾತು ಫಲಕಗಳನ್ನು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.