ಮನೆ ಸ್ಥಳೀಯ ನಿರಂತರ ಕಲಿಕೆ, ರಿಸ್ಕ್‌ ತೆಗೆದುಕೊಳ್ಳುವ ಮನೋಧರ್ಮವಿದ್ದರೆ ಕಾನೂನು ವೃತ್ತಿಯಲ್ಲಿ ಯಶಸ್ಸು ಖಂಡಿತ: ರವೀಂದ್ರ ಹೆಗ್ಡೆ

ನಿರಂತರ ಕಲಿಕೆ, ರಿಸ್ಕ್‌ ತೆಗೆದುಕೊಳ್ಳುವ ಮನೋಧರ್ಮವಿದ್ದರೆ ಕಾನೂನು ವೃತ್ತಿಯಲ್ಲಿ ಯಶಸ್ಸು ಖಂಡಿತ: ರವೀಂದ್ರ ಹೆಗ್ಡೆ

0

ಮೈಸೂರು: ಕಾನೂನು ವೃತ್ತಿ ವಿದ್ಯಾರ್ಥಿ ಬದುಕಿನಷ್ಟು ಸುಲಭದ್ದಲ್ಲ. ನಿರಂತರ ಕಲಿಕೆ, ಎಂಥಾ ಬಿಕ್ಕಟ್ಟಿನ ಸಂದರ್ಭಗಳಲ್ಲೂ ರಿಸ್ಕ್‌ ತೆಗೆದುಕೊಳ್ಳುವ ಮನೋಧರ್ಮವಿದ್ದರೆ ಈ ವೃತ್ತಿಯಲ್ಲಿ ಯಶಸ್ಸು ಖಂಡಿತ ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆಯವರು ಇಲ್ಲಿನ ವಿದ್ಯಾವರ್ಧಕ ಕಾನೂನು ಕಾಲೇಜು ಬೆಂಗಳೂರು ವಲಯ ಒಂದರ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆಂದು ಆಯೋಜಿಸಲಾಗಿದ್ದ ʼಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರʼದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

Join Our Whatsapp Group

“ಭಾರತ ದಂಡ ಸಂಹಿತೆ, ೧೮೬೦, ದಂಡ ಪ್ರಕ್ರಿಯಾ ಸಂಹಿತೆ, ೧೯೭೩, ಭಾರತೀಯ ಸಾಕ್ಷ್ಯ ಅಧಿನಿಯಮ, ೧೮೭೨ ದೇಶದ ಈ ಮೂರು ಕ್ರಿಮಿನಲ್‌ ಕಾನೂನುಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಾದ ನೀವು ವಕೀಲಿ ವೃತ್ತಿಗೆ ಕಾಲಿಡುತ್ತಿದ್ದೀರಿ. ಹೊಸ ಕಾನೂನು ಹೇಗೋ ಏನೋ ಅನ್ನುವ ಆತಂಕ ನಿಮ್ಮಲ್ಲಿರಬಹುದು. ಇದು ಸಹಜ ಕೂಡ. ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ ಕಲಿತಿದ್ದ ಬಾಡಿಗೆ ನಿಯಂತ್ರಣ ಕಾಯಿದೆ ಕೂಡ ನಾನು ವಕೀಲಿ ವೃತ್ತಿಯ ತರಬೇತಿಗೆ ಬಂದ ಕೂಡಲೇ ಬದಲಾಯಿತು. ಆಗ ನನ್ನಲ್ಲೂ ಆತಂಕ ಮನೆಮಾಡಿತು. ಆದರೆ, ನಾನು ದೃತಿಗೆಡಲಿಲ್ಲ. ಭಾರತದ ಕಾನೂನುಗಳು ನಿಂತ ನೀರಲ್ಲ ಎಂಬುದನ್ನು ಈ ಸಂದರ್ಭ ನಮಗೆ ಮನದಟ್ಟು ಮಾಡುತ್ತದೆ” ಎಂದು ನ್ಯಾಯಮೂರ್ತಿ ರವೀಂದ್ರ ಹೆಗ್ಡೆಯವರು ಅಭಿಪ್ರಾಯಪಟ್ಟರು.

“ಪದವಿ ಮುಗಿಸಿ ಬಂದವರು ಮೂರು ವರ್ಷ ಹಾಗೂ ಪಿಯುಸಿ ಓದಿದ ವಿದ್ಯಾರ್ಥಿಗಳು ಐದು ವರ್ಷಗಳ ಕಾನೂನು ವ್ಯಾಸಂಗ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಅಂತಿಮ ವರ್ಷಕ್ಕೆ ಬಂದಕೂಡಲೇ ಮುಂದೇನೂ ಎಂಬ ಪ್ರಶ್ನೆ ನಮಗೆ ಆತಂಕದ ಬದಲು ಕುತೂಹಲ ಉಂಟುಮಾಡಬೇಕಿದೆ. ಕರ್ನಾಟಕದಲ್ಲಂತೂ ಕನ್ನಡದಲ್ಲು ಕಾನೂನು ಪುಸ್ತಕಗಳು ಹೇರಳವಾಗಿ ಸಿಗುವುದರಿಂದ ಎಪಿಪಿ, ಕಿರಿಯ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಗಳನ್ನು ಈಗ ಕನ್ನಡ ಮಾಧ್ಯಮದಲ್ಲಿ ಕಾನೂನು ಓದಿದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾಸುಮಾಡಿ ನ್ಯಾಯಾಧೀಶರಾಗುತ್ತಿರುವುದನ್ನು ನಾವು ಪ್ರತಿವರ್ಷ ಕಾಣುತ್ತಿದ್ದೇವೆ. ಈ ಹಿಂದೆ ಎಂಭತ್ತು, ತೊಂಭತ್ತು ಪರ್ಸೆಂಟ್‌ ಅಂಕಪಡೆದ ವಿದ್ಯಾರ್ಥಿಗಳು ಮೆಡಿಕಲ್‌, ಇಂಜಿನಿಯರಿಂಗ್‌ ಕೋರ್ಸುಗಳತ್ತ ಹೋಗುವುದು ವಾಡಿಕೆಯಾಗಿತ್ತು. ಈಗ ಆ ಮಟ್ಟದ ಅಂಕಗಳಿಸುವ ವಿದ್ಯಾರ್ಥಿಗಳು ಕಾನೂನು ಓದಿನತ್ತ ಬರುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ” ಎಂದು ರವೀಂದ್ರ ಹೆಗ್ಡೆಯವರು ಹೇಳಿದರು.

“ಈ ಹಿಂದೆ ಕಾನೂನು ವೃತ್ತಿಗೆ ಬರುವವರಲ್ಲಿ ವಾದಮಾಡುವ ಕೌಶಲ್ಯದ ಜೊತೆಗೆ ಡ್ರಾಫ್ಟಿಂಗ್‌ ನೈಪುಣ್ಯವೂ ಇರಲೇಬೇಕಾಗಿತ್ತು. ಈಗ ಇವೆರಡರ ಜೊತೆಗೆ ಇಂಗ್ಲಿಷ್‌ ಭಾಷೆಯ ಮೇಲಿನ ಹಿಡಿತ, ಕಂಪ್ಯೂಟರ್‌ ಜ್ಞಾನ ಇರಲೇಬೇಕಾದುದು ಅನಿವಾರ್ಯವಾಗಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನ್ಯಾಯಾಲಯಗಳಿಗೂ ಕಾಲಿಟ್ಟಿರುವುದರಿಂದ ಆರ್ಟಿಫಿಶಿಯಲ್‌ ತಂತ್ರಜ್ಞಾನದ ಕಲಿಕೆಯತ್ತಲೂ ಯುವ ವಕೀಲರು ಗಮನಕೊಡಬೇಕಿದೆ. ಮೈಸೂರಿನಂತಹ ಪ್ರದೇಶಗಳಲ್ಲಿ ಒಂದು ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ ಕ್ರಮಿಸುವ ಹಾದಿ ದೂರವಿಲ್ಲದಿರುವುದರಿಂದ ಯುವ ವಕೀಲರಿಗೆ ಇಲ್ಲಿ ಆರಂಭದ ಹಂತದ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡು ಕಲಿಯುವ ಸಾಧ್ಯತೆಗಳನ್ನು ಕಾಣಬಹುದು. ಆದರೆ, ಇದೇ ಮಾತುಗಳನ್ನು ಬೆಂಗಳೂರಿನಲ್ಲಿ ವೃತ್ತಿ ಆರಂಭಿಸುವ ಯುವ ವಕೀಲರಿಗೆ ಹೇಳಲಾರೆ. ಅಲ್ಲಿ ಒಂದು ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ ಕ್ರಮಿಸುವ ಹಾದಿಯೇ ಕಷ್ಟಕರವೆನ್ನಿಸುತ್ತದೆ” ಎಂದು ರವೀಂದ್ರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

“ಕ್ರಿಮಿನಲ್‌ ಸ್ವರೂಪದ ಪ್ರಕರಣಗಳಲ್ಲಿ ಹೆಚ್ಚಿನ ಆಸಕ್ತಿ ನಿಮ್ಮಲ್ಲಿದ್ದರೆ ಹಿರಿಯ ವಕೀಲರು ಪಾಟೀಸವಾಲಿನ ಪ್ರಶ್ನೆಗಳನ್ನು ಸಾಕ್ಷಿದಾರರಿಗೆ ಹೇಗೆ ಕೇಳುತ್ತಾರೆ ಎಂಬುದನ್ನು ನ್ಯಾಯಾಲಯದಲ್ಲಿ ಕಲಿಯಬಹುದು. ಪಾಟೀಸವಾಲಿನಂತಹ ಹಂತಗಳಲ್ಲಿ ನ್ಯಾಯವಾದಿಗಳು ಪೂರ್ವನಿರ್ಧಾರಿತ ಪ್ರಶ್ನೆಗಳಿಗಿಂತ ಸ್ಥಳದಲ್ಲಿಯೇ ಹಠಾತ್‌ ಸಾಕ್ಷಿದಾರ ಕೊಟ್ಟ ಉತ್ತರದಿಂದಲೇ ಪ್ರಶ್ನೆಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಹಿರಿಯ ನುರಿತ ವಕೀಲರ ತಮ್ಮ ಅನುಭವದ ಆಧಾರದ ಮೇಲೆ ಕೇಳುವ ಪ್ರಶ್ನೆಗಳು ಯುವ ವಕೀಲರಿಗೆ ನೆರವಾಗಬಲ್ಲದು. ಸೈಬರ್‌ ಅಪರಾಧಗಳು, ಕಮರ್ಷಿಯಲ್‌ ಲಿಟಿಗೇಶನ್‌ಗಳು, ಬೌದ್ಧಿಕ ಸ್ವತ್ತಿನ ತಗಾದೆಗಳು, ವರಮಾನ ತೆರಿಗೆ ಪಾವತಿ ಕುರಿತ ಪ್ರಕರಣಗಳು, ಕಾರ್ಮಿಕರ ವಿವಾದಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯ ಮತ್ತು ಟ್ರಿಬ್ಯೂನಲ್‌ಗಳಿಗೆ ಬರುತ್ತಿವೆ. ನ್ಯಾಯವಾದಿಗಳು ಈಗ ಈ ಬಗೆಯ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆಗಾರರಾಗಿ, ಸಂಧಾನಕಾರರಾಗಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾಗಿ ಪ್ರಕರಣಗಳನ್ನು ಇತ್ಯರ್ಥ ಮಾಡಬಹುದಾದ ಹೊಸ ಸಾಧ್ಯತೆಗಳನ್ನು ನ್ಯಾಯಾಲಯಗಳೇ ಸೃಷ್ಟಿಸಿವೆ” ಎಂದು ರವೀಂದ್ರ ಹೆಗ್ಡೆಯವರು ಹೇಳಿದರು.

“ನಿರಂತರ ಓದು, ಕಲಿಕೆ, ವಿನಯ, ವಿವೇಕಗಳು ವಕೀಲಿ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರತಿಯೊಬ್ಬ ಯುವನ್ಯಾಯವಾದಿಗಳಲ್ಲಿ ಅನಿವಾರ್ಯವೆಂಬಂತೆ ಇರಲೇಬೇಕು. ಈ ವೃತ್ತಿಯ ಆರಂಭದ ದಿನಗಳಲ್ಲಿ ನಿಮಗೆ ನೀವು ನಿರೀಕ್ಷಿಸಿದಷ್ಟು ದುಡ್ಡು ಯಶಸ್ಸು ಸಿಗದೇ ಇರಬಹುದು. ಆದರೆ ನಿರಂತರ ಶ್ರಮ, ಕಲಿಯುವ ಮತ್ತು ಕಲಿತದ್ದನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ವಿವೇಚನೆ ಮಾತ್ರ ನಿಮ್ಮನ್ನು ಗೆಲುವಿನ ದಡ ಮುಟ್ಟಿಸಬಲ್ಲದು” ಎಂದು ರವೀಂದ್ರ ಹೆಗ್ಡೆಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಿವಿಮಾತು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುಂಡಪ್ಪಗೌಡ, ಕಾರ್ಯದರ್ಶಿಗಳಾದ ಪಿ.ವಿಶ್ವನಾಥ್‌, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕಾರ್ಯಕ್ರಮ ಸಂಯೋಜಕರಾದ ಆರ್.ಮೋಹನ್‌, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ದೀಪು ಹಾಗೂ ಈ ಕಾರ್ಯಕ್ರಮದ ಸಂಯೋಜಕರಾದ ಡಾ.ಶ್ರೀದೇವಿ ಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಾಗಾರದಲ್ಲಿ ಬೆಂಗಳೂರು ವಲಯ ಒಂದರ ವಿವಿಧ ಕಾನೂನು ಕಾಲೇಜುಗಳಿಂದ ಐವತ್ತಕ್ಕೂ ಹೆಚ್ಚಿನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.