ಮನೆ ಅಪರಾಧ ಉದ್ಯಮಿ ಮನೆಯಲ್ಲಿ ಚಿನ್ನಾಭರಣ, ವಜ್ರ ಕಳ್ಳತನ: ಮನೆಗೆಲಸದ ಮಹಿಳೆ ಸೇರಿ ಮೂವರ ಬಂಧನ

ಉದ್ಯಮಿ ಮನೆಯಲ್ಲಿ ಚಿನ್ನಾಭರಣ, ವಜ್ರ ಕಳ್ಳತನ: ಮನೆಗೆಲಸದ ಮಹಿಳೆ ಸೇರಿ ಮೂವರ ಬಂಧನ

0

ಬೆಂಗಳೂರು: ಚಿನ್ನಾಭರಣ, ವಜ್ರಾಭರಣ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿರುವ ಮಾರತ್ತಹಳ್ಳಿ ಪೊಲೀಸರು, 30 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Join Our Whatsapp Group

ಆರೋಪಿಗಳನ್ನು ನೀಲಸಂದ್ರ ನಿವಾಸಿಗಳಾದ ದಿವ್ಯಾ(22) ಮತ್ತು ಆಕೆಯ ಚಿಕ್ಕಮ್ಮ ಮಂಜು(39) ಹಾಗೂ ಮಂಜು ಅವರ ಪರಿಚಯಸ್ಥ ಈಜಿಪುರದ ರೋಮನ್ ಎಂದು ಗುರುತಿಸಲಾಗಿದೆ.

ದಿವ್ಯಾ ಎಂಬ ಮಹಿಳೆ ಉದ್ಯಮಿ ವಿಕ್ರಮ ವೈದ್ಯನಾಥನ್ ಅವರ ನಿವಾಸದಲ್ಲಿ ಮನೆಗೆಲಸ ಮಾಡುತ್ತಿದ್ದರು. ಜುಲೈ 14 ರಂದು ವೈದ್ಯನಾಥನ್ ಅವರು ತಮ್ಮ ಮನೆಯಿಂದ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಅವರ ಮನೆಯಲ್ಲಿ ಕೆಲಸ ಮಾಡುವ ಏಳು ಜನರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಲ್ಲಾ ಕೆಲಸಗಾರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ದಿವ್ಯಾಳನ್ನು ಕಸ್ಟಡಿಗೆ ಪಡೆದರು. ವಿಚಾರಣೆ ವೇಳೆ ದಿವ್ಯಾ ಚಿನ್ನಾಭರಣ ಕದ್ದು ತನ್ನ ಚಿಕ್ಕಮ್ಮ ಮಂಜುಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಮಂಜು ಅವರು ಚಿನ್ನಾಭರಣವನ್ನು ರೋಮನ್‌ಗೆ ನೀಡಿದ್ದು, ಅವರು ವಿವಿಧ ಆಭರಣ ಅಂಗಡಿಗಳಲ್ಲಿ ಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ದಿವ್ಯಾ ಅವರ ಮನೆಯಲ್ಲಿ ವಾಚ್ ಮತ್ತು ಚಿನ್ನದ ಸರ ಮತ್ತು ಈಜಿಪುರದ ವಿವಿಧ ಅಂಗಡಿಗಳಿಂದ 30 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.