ಮನೆ ಅಪರಾಧ ಚಿಕ್ಕಬಳ್ಳಾಪುರ: ಉದ್ಯಮಿಗಳನ್ನು ಅಪಹರಿಸಿ ಹಣ ಸುಲಿಗೆ ಮಾಡುತ್ತಿದ್ದ ಏಳು ಖದೀಮರ ಬಂಧನ

ಚಿಕ್ಕಬಳ್ಳಾಪುರ: ಉದ್ಯಮಿಗಳನ್ನು ಅಪಹರಿಸಿ ಹಣ ಸುಲಿಗೆ ಮಾಡುತ್ತಿದ್ದ ಏಳು ಖದೀಮರ ಬಂಧನ

0

ಚಿಕ್ಕಬಳ್ಳಾಪುರ: ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸಿ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ 7 ಮಂದಿಯನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Our Whatsapp Group

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಈ ಕುರಿತು ಶುಕ್ರವಾರ (ಆ.2) ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಆರೋಪಿಗಳ ವಿವರ ಹಾಗೂ ಪ್ರಕರಣಗಳ ಮಾಹಿತಿ ನೀಡಿದರು.

ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರದ ಬರ್ಕತ್ ವುಲ್ಲಾ, ಬೆಂಗಳೂರು ನಗರದ ಬಿಟಿಎಂ ಲೇಔಟ್ ನ ಲೋಹಿತ್ ಕುಮಾರ್, ಪ್ರವೀಣ ಅಲಿಯಾಸ್ ನೇಪಾಳಿ, ಕೋಲಾರದ ರಾಮಸಂದ್ರದ ಸಂತೋಷ್, ಕೋಲಾರದ ಚಿನ್ನಾಪುರದ ವೆಂಕಟೇಶ್, ಬೆಂಗಳೂರಿನ ಎ.ಜೆ.ಕಾಲೋನಿಯ ಮಾರುತಿ ಪ್ರಸನ್ನ, ಬೆಂಗಳೂರಿನ ಹುಳಿಮಾವು ಭರತ್ ಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 41 ಲಕ್ಷ ರೂ, ನಗದು, ನಾಲ್ಕು ಕಾರು, ಒಂದು ಚಿನ್ನದ ಸರ, ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಕೆಲವರು ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ರವರ ಅಪಹರಣ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದರು. ಅಲ್ಲದೇ ರಾಜ್ಯದ ವಿವಿಧ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರಲ್ಲಿ ಪ್ರವೀಣ್ ಅಲಿಯಾಸ್ ನೇಪಾಳಿ ಹಾಗೂ ಲೋಹಿತ್ ಕುಮಾರ್ ಪ್ರಮುಖರಾಗಿದ್ದಾರೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದರು.

ಆರೋಪಿಗಳ ಬಂಧನಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ಹಾಗೂ ಹೆಚ್ವುವರಿ ಪೊಲೀಸ್ ವರಿಷ್ಟಾಧಿಕಾರಿ ಆರ್.ಐ.ಕಾಶಿಂ ಮಾರ್ಗದರ್ಶನದಲ್ಲಿ ಇಡೀ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ತಂಡ ಭಾಗವಹಿಸಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಟಾಧಿಕಾರಿ ಆರ್.ಐ.ಕಾಶಿಂ, ಆರಕ್ಷಕ ವೃತ್ತ ನಿರೀಕ್ಷಕರಾದ ಚಿಕ್ಕಬಳ್ಳಾಪುರ ವೃತ್ತದ ಮಂಜುನಾಥ, ಬಾಗೇಪಲ್ಲಿ ಪ್ರಶಾಂತ ಆರ್.ವರ್ಣಿ, ನಯಾಜ್ ಅಹ್ಮದ್, ಸೂರ್ಯ ಪ್ರಕಾಶ್ ಸರಿದಂತೆ ಮತ್ತಿತರರು ಇದ್ದರು.