ಮನೆ ರಾಜ್ಯ ಶೂನ್ಯ ಫಲಿತಾಂಶ: ಎರಡು ಬಿಬಿಎಂಪಿ ಶಾಲಾ ಮುಖ್ಯೋಪಾಧ್ಯಯರಿಗೆ ಶೋಕಾಸ್ ನೋಟಿಸ್

ಶೂನ್ಯ ಫಲಿತಾಂಶ: ಎರಡು ಬಿಬಿಎಂಪಿ ಶಾಲಾ ಮುಖ್ಯೋಪಾಧ್ಯಯರಿಗೆ ಶೋಕಾಸ್ ನೋಟಿಸ್

0
ಸಾಂದರ್ಭಿಕ ಚಿತ್ರ

ಬೆಂಗಳೂರು(Bengaluru): ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಎರಡು ಶಾಲೆಗಳು ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಶೂನ್ಯ ಸಾಧನೆ ಮಾಡಿರುವ ಹಿನ್ನಲೆಯಲ್ಲಿ ಈ ಎರಡು ಶಾಲೆಗಳ ಮುಖ್ಯೋಪಾಧ್ಯಯರಿಗೆ ಕಾರಣ ಕೇಳಿ ಶೋಕಾಸ್  ನೀಡಲಾಗಿದೆ. ಕೆಲ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

SSLC ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್ ನ 19 ಮತ್ತು ಕೆ.ಜಿ.ನಗರದ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರಿಣಾಮ ಎರಡೂ ಶಾಲೆಗಳು  ಶೂನ್ಯ ಫಲಿತಾಂಶ  ದಾಖಲಿಸಿವೆ.  2020ರಲ್ಲಿ ಶೇ.50.16, 2019ರಲ್ಲಿ ಶೇ.52, 2018ರಲ್ಲಿ ಶೇ. 51ರಷ್ಟು ಫಲಿತಾಂಶ ದಾಖಲಾಗಿತ್ತು. ಈ ವರ್ಷ ರಾಜ್ಯದಲ್ಲಿ ಶೇ.71.27ರಷ್ಟು  ಫಲಿತಾಂಶ ಬಂದಿದೆ. ಕೆಜಿ ನಗರ  ಶಾಲೆ 2020ರ ನಂತರ ಎರಡನೇ ಬಾರಿಗೆ ಶೂನ್ಯ ಫಲಿತಾಂಶ ಪಡೆದುಕೊಂಡಿದೆ.

ಇನ್ನೂ ಈ ಕುರಿತು ಬಿಬಿಎಂಪಿಯ ಶಿಕ್ಷಣ ಸಹಾಯಕ ಆಯುಕ್ತ ಉಮೇಶ್ ಡಿ ಎಸ್ ಮಾತನಾಡಿ, ಬಿಬಿಎಂಪಿ ಶಾಲೆಗಳ ಸುಧಾರಣೆಗೆ ಮೀಸಲಿರಿಸಿದ್ದ ಅನುದಾನ ಕಡಿಮೆಯಾಗಿದೆ. ಈ ವರ್ಷ ಸುಮಾರು 100 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದರಲ್ಲಿ ಕೇವಲ ಶೇ.70ರಷ್ಟು (70 ಕೋಟಿ) ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಹೇಳುತ್ತಾರೆ.

ಈ 70 ಕೋಟಿಯಲ್ಲಿ 22 ಕೋಟಿ ರೂ.ಗಳನ್ನು ಶಿಕ್ಷಕರ ವೇತನಕ್ಕೆ ಮತ್ತು ಇನ್ನುಳಿದ ಮೊತ್ತವನ್ನು ಶಾಲೆಯ ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಬಹುತೇಕ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.

ಶೂನ್ಯ ಫಲಿತಾಂಶ ಬರಲು ಕಾರಣವೇನು ? : ಶಾಲಾ ಮುಖ್ಯೋಪಾಧ್ಯಾಯ ಅಬ್ದುಲ್ ರಹೀಂ ಹೇಳುವಂತೆ, ಮರ್ಫಿ ಟೌನ್ ಬಿಬಿಎಂಪಿ ಶಾಲೆ ಹುಲಸೂರು ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಹೆಚ್ಚು ತಮಿಳು ಮಾತನಾಡುವ ಕುಟುಂಬಗಳು ವಾಸವಾಗಿವೆ. ಆದ್ದರಿಂದ ಇಲ್ಲಿಯ ವಿದ್ಯಾರ್ಥಿಗಳು ಕನ್ನಡ ವಿಷಯಗಳನ್ನು ಗ್ರಹಿಸಿಕೊಳ್ಳಲು ಕಷ್ಟಪಡುತ್ತಾರೆ. ಆದ್ದರಿಂದ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ವಾಸ್ತವವಾಗಿ 19 ವಿದ್ಯಾರ್ಥಿಗಳಲ್ಲಿ 10 ಮಕ್ಕಳು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಮಕ್ಕಳು ಅಂತ್ಯಕ್ರಿಯೆ ಸಮಯದಲ್ಲಿ ಡ್ರಮ್ ಬೀಟರ್ ಗಳಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ತಿಂಗಳಲ್ಲಿ 15 ದಿನ ಶಾಲೆಗೆ ಗೈರಾಗುತ್ತಾರೆ. ಇನ್ನೂ ಹುಡುಗಿಯರು ಮನೆ ಕೆಲಸಗಳಲ್ಲಿ ತೊಡಗಿಕೊಳ್ಳುವದರಿಂದ ಅವರಿಗೆ ಓದಲು ಸಮಯ ಸಿಗಲ್ಲ. ಈ ಎಲ್ಲ ಕಾರಣಗಳು ನಮ್ಮ ಫಲಿತಾಂಶದಲ್ಲಿ ಕಾಣಿಸುತ್ತಿದೆ ಎಂದು ಮುಖ್ಯೋಪಾಧ್ಯಯರು ಮಾಹಿತಿ ನೀಡಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳು ಜೂನ್ 27 ರಂದು ಪ್ರಾರಂಭವಾಗುವ ಪೂರಕ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.