ಮನೆ ರಾಜಕೀಯ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ: ಡಿ.ಕೆ.ಶಿವಕುಮಾರ್

ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ: ಡಿ.ಕೆ.ಶಿವಕುಮಾರ್

0

ಮದ್ದೂರು:ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲ್ ಹಾಕಿದರು.

Join Our Whatsapp Group


ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು ವಿಜಯೇಂದ್ರ, ಅಶೋಕ್ ಅವರೇ.., ಸುಮ್ಮನೆ ಪಾದಯಾತ್ರೆ ಮಾಡುವುದಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟು ಹೆಜ್ಜೆ ಹಾಕಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲೇ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ ಎಂಬುದು ನಿಮಗೆ ಸಹಿಸಲು ಆಗುತ್ತಿಲ್ಲ.ಬಡವರಿಗೆ ಕೆಲಸ ಮಾಡುವ ಅವಕಾಶ ಬಿಜೆಪಿ, ಜೆಡಿಎಸ್ ಗೆ ಸಿಗದ ಕಾರಣಕ್ಕೆ ಕೈ,ಕೈ ಹೊಸಕಿಕೊಳ್ಳುತ್ತಿದ್ದಾರೆ ಎಂದರು.
“ನನ್ನ ಅಜ್ಜಯ್ಯನ ಸುದ್ದಿಗೆ ಬರಬೇಡ. ಅಜ್ಜಯ್ಯನ ಶಕ್ತಿ ಏನು ಎಂಬುದು ನಿನಗೇನು ಗೊತ್ತು? ಅವರ ಶಕ್ತಿ ನನಗೆ ಮಾತ್ರ ಗೊತ್ತು. ಏತಕ್ಕಾಗಿ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದೆ ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು ಎಂಬುದನ್ನು ನೀವೇ ಚರ್ಚೆ ಮಾಡಿಕೊಳ್ಳಿ ಎಂದರು.
ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗನಾದ ನಾನು ಇಂದು ಹೆದರುತ್ತೇನೆಯೆ ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ನಾವು ನಿಮ್ಮ ಪೆನ್ ಡ್ರೈವ್ ವಿಚಾರಕ್ಕೆ ಬಂದಿದ್ದೇವೆಯೇ, ನೀನುಂಟು ನಿಮ್ಮ ಅಣ್ಣ, ತಮ್ಮಂದಿರು ಉಂಟು, ನಿನ್ನ ಕುಟುಂಬ ಉಂಟು. ಪೆನ್ ಡ್ರೈವ್ ಹಿಂದೆ ಮಹಾನಾಯಕ, ಉಪಮುಖ್ಯಮಂತ್ರಿ ಇದ್ದಾರೆ ಎಂದು ಹೇಳಿದ್ದೀರಿ. ಈ ಮಾತಿಗೆ ಬದ್ದನಾಗಿ ಇರಬೇಕಿತ್ತು. ನೀವು ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಇದು ಇವತ್ತಿನದಲ್ಲ, 1985 ರಿಂದ ನಿಮ್ಮ ಕುಟುಂಬದ ಹಾಗೂ ನನ್ನ ನಡುವೆ ತಿಕ್ಕಾಟ ನಡೆಯುತ್ತಿದೆ ಎಂದು ಹೇಳಿದರು.
ಈಗ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಹಾಕಿ ಹೇಳಿಕೆ ನೀಡಿ ಏಕೆ ಓಡಿ ಹೋಗುತ್ತಾ ಇದ್ದಿಯಾ,ಅವನು ಯಾರೋ ಪ್ರೀತಂ ಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದಿದ್ದಾನೆ ಎಂದು ಹೇಳಿದೆ. ಆದರೆ ಇದಕ್ಕೂ ಮೊದಲು ರೇವಣ್ಣನದ್ದೇ ಬೇರೆ ಕುಟುಂಬ ನನ್ನದೇ ಬೇರೆ ಕುಟುಂಬ, ನಾವು ಭಾಗವಾಗಿದ್ಧೇವೆ ಎಂದು ಹೇಳಿದ್ದೇ. ಈಗ ಎಲ್ಲಿಂದ ಬಂತು ಕುಟುಂಬ, ನಾವು ನಿನ್ನ ಕುಟುಂಬದ ವಿಚಾರಕ್ಕೆ ಕೈ ಹಾಕುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯ ದೇವರಾಜೇಗೌಡ ನಿಂದ ಪತ್ರ ಬರೆಸಿದವನು ನೀನೆ ಅಲ್ಲವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯನ್ನಾಗಿ ಮಾಡಿದ ನಿಮ್ಮ ವಿರುದ್ದವೇ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರಲ್ಲಾ ಸರಿಯೇ ಎಂದು ಯಾರೋ ಪ್ರಶ್ನಿಸಿದರು. ಅದಕ್ಕೆ ನಾನು ಹೇಳಿದೆ ಸ್ವಂತ ಅಣ್ಣ, ತಮ್ಮಂದಿರನ್ನೇ ಸಹಿಸುವುದಿಲ್ಲ. ಇನ್ನು ನನ್ನ ಹಾಗೂ ಚಲುವರಾಯಸ್ವಾಮಿ ಅವರನ್ನು ಸಹಿಸುತ್ತಾನೆಯೇ, ಮಂಡ್ಯ ಸಂಸದನಾದ ಕಾರಣಕ್ಕೆ ಇಷ್ಟೆಲ್ಲಾ ಹೇಳುತ್ತಿದ್ದೇನೆ. ನಾನು ಅವನ ಮಗನನ್ನು ಗೆಲ್ಲಿಸಲು ನೋಡಿದೆ. ಆದರೆ ಜನ ಸೋಲಿಸಿದರು” ಎಂದರು.
ಮಂಡ್ಯ ಮತ್ತು ಹಾಸನಕ್ಕೆ ದೊಡ್ಡ ಕೈಗಾರಿಕೆಗಳನ್ನು ತಂದು ತಲಾ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿದ್ದೀರಿ. ನೀವು ಈ ಕೆಲಸ ಮಾಡಿದರೆ ನನ್ನ ಹಾಗೂ ಚಲುವರಾಯಸ್ವಾಮಿ ಅವರ ಸಂಪೂರ್ಣ ಬೆಂಬಲವಿರುತ್ತದೆ ಎಂದು ಹೇಳಿದರು.
ಕಬ್ಬಿಣದ ಮಂತ್ರಿ ಕುಮಾರಣ್ಣ. ನೀವು ಮತ್ತು ಬಿಜೆಪಿಯವರು ಕತ್ತರಿ ತಯಾರು ಮಾಡುವವರು. ನಾವು ಸೂಜಿ ತಯಾರು ಮಾಡುತ್ತೇವೆ. ನೀವು ಸಮಾಜವನ್ನು ಕತ್ತರಿಸುವವರು,ನಾವು ಸಮಾಜವನ್ನು ಹೊಲಿಯುವವರು. ಜಾತಿ, ಧರ್ಮ, ಕುಟುಂಬ ಎಂದು ಕತ್ತರಿಸುತ್ತೀರಿ. ಆದರೆ ನಾವು ಎಲ್ಲರನ್ನು ಒಂದುಗೂಡಿಸುತ್ತೇವೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ. ಕುಮಾರಣ್ಣ ಈ ಹಿಂದೆ ಏನೇನು ಮಾತನಾಡಿದ್ದೆ. ಯಾರ ಗುಣಗಾನ ಮಾಡಿದ್ದೆ ಎಲ್ಲವನ್ನು ಮೈಸೂರು ಮತ್ತು ಮಂಡ್ಯದಲ್ಲಿ ತೋರಿಸುತ್ತೇವೆ. ನಿನ್ನ ಮಾತು, ಗುಣಗಾನ, ಬಿಜೆಪಿ ಗುಣಗಾನ, ನಿಮ್ಮದು ಅವರದ್ದು ವಾಕ್ಸಮರ ಎಲ್ಲವನ್ನೂ ತೋರಿಸುತ್ತೇನೆ” ಎಂದರು.
ಈಗ ನನ್ನ, ನಿನ್ನ ಆಸ್ತಿಯ ಪಟ್ಟಿಯಿದೆ. ನಿನ್ನ ಸಹೋದರನ ಬೇನಾಮಿಯಾದ ಆಸ್ತಿಯ ಪಟ್ಟಿ ಕೊಡಪ್ಪಾ. ನೀನು ಅಧಿಕಾರದಲ್ಲಿ ಇದ್ದಾಗ ಕನಕಪುರ ಸೇರಿದಂತೆ ಇತರೆಡೆ ಮಾಡಿರುವ ಪಟ್ಟಿ ಹೇಳಿದ್ದೇನೆ. ನೀನು ಒಂದು ಪಟ್ಟಿ ಕೊಡು ಹಾಗೂ ಮೊದಲು ಪಾದಯಾತ್ರೆ ಏಕೆ ಬೇಡ ಎಂದು ಹೇಳಿದೆ ನಂತರ ಏಕೆ ಒಪ್ಪಿಕೊಂಡೆ ಇದಕ್ಕೆ ಮೊದಲು ಉತ್ತರಿಸು” ಎಂದು ಆಗ್ರಹಿಸಿದರು.
ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಡೆದಿರುವ ಎಪಿಎಂಸಿಯಿಂದ 47 ಕೋಟಿ ಲೂಟಿ. ಭೋವಿ ಅಭಿವೃದ್ದಿ ನಿಗಮದಲ್ಲಿ 87 ಕೋಟಿ, ದೇವರಾಜು ಅರಸು ಟ್ರಕ್ ಟರ್ಮಿನಲ್ 50 ಕೋಟಿ, ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ, ಕೊರೋನಾ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದರು. ಪಿಎಸ್ ಐ ಹಗರಣ, ಪರಶುರಾಮ ಪ್ರತಿಮೆ ಹಗರಣ, ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆಯಲ್ಲಿ 700 ಕೋಟಿಗೂ ಹೆಚ್ಚು ಅಕ್ರಮ ಹಣದ ದಾಖಲೆಗಳು ದೊರೆಯಿತು. ಅಂಗನವಾಡಿಯ ಮಕ್ಕಳ ಮೊಟ್ಟೆ ಹಗರಣ. ಕುಮಾರಸ್ವಾಮಿ ಅವರ ಗಣಿ ಹಗರಣದ ಬಗ್ಗೆ ಆನಂತರ ಮಾತನಾಡುತ್ತೇನೆ ಎಂದರು.
ನಮಗೆ ಮತ ನೀಡದ ಮುಸ್ಲಿಮರ ಗತಿ ಏನಾಗುತ್ತದೆ ನೋಡಿ ಎಂದು ಕುಮಾರಸ್ವಾಮಿ ಅವರು ಧಮ್ಕಿ ಹಾಕಿದ್ದಾರೆ. ನೀವು, ನಿಮ್ಮ ತಂದೆ ಮುಸ್ಲಿಂ ಮತದಾರರು ಇಲ್ಲದಿದ್ದರೇ ವಿಧಾನಸಭೆಗೆ ಹೋಗುತ್ತಲೇ ಇರಲಿಲ್ಲ. ನಿಮ್ಮ ತಂದೆ ʼಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸಲ್ಮಾನನಾಗಿ ಹುಟ್ಟುತ್ತೇನೆʼ ಎಂದು ಹೇಳಿದ್ದರು. ಈ ಮಾತು ಮರೆಯಬೇಡಿ ನೆನಪಿನಲ್ಲಿಟ್ಟುಕೊಳ್ಳಿ” ಎಂದು ಹೇಳಿದರು.
ನಮ್ಮ ದೇಶ ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಎಸ್.ಎಂ.ಕೃಷ್ಣ ಅವರು ಕುವೆಂಪು ಅವರು ಬರೆದ ಹಾಡನ್ನು ನಾಡಗೀತೆಯನ್ನಾಗಿ ಘೋಷಣೆ ಮಾಡಲಾಯಿತು. ಇದರಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಕರ್ನಾಟಕವನ್ನು ಕರೆಯಲಾಗಿದೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಯಾರೂ ಬಗ್ಗುವುದಿಲ್ಲ. ಎಲ್ಲಾ ಧರ್ಮದವರು ಸಹೋದರರಂತೆ ಬಾಳಬೇಕು. ನಿಮ್ಮ ಧಮ್ಕಿಗೆ ಯಾವ ಮುಸಲ್ಮಾನ ಬಂಧುಗಳು ಹೆದರುವುದಿಲ್ಲ. ಈ ವಿಚಾರದಲ್ಲಿ ಅವರಿಗೆ ಜ್ಞಾನ, ಪರಿಜ್ಞಾನ ಬರಲಿ ಎಂದರು.
ಕಾಂಗ್ರೆಸ್ ಪಕ್ಷದ ಸಾರಥಿಯಾಗಿ ನಾನು ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿದೆ. ನಿನ್ನ ಅಧ್ಯಕ್ಷತೆಯಲ್ಲಿ ಗೆದಿದ್ದು ಕೇವಲ 19 ಸ್ಥಾನಗಳು ಮಾತ್ರ. ಈಗ ಎರಡು ಸೀಟು ಗೆದ್ದು, ಬಿಜೆಪಿಯವರನ್ನು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದೀಯಾ. ನಿನ್ನ ಮಗ ಹಾಗೂ ಜಿ,ಟಿ.ದೇವೇಗೌಡರು ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಏಕೆ ಹೇಳಿದ್ದರು ರು ಎಂದು ವ್ಯಂಗ್ಯವಾಡಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ದಲ್ಲಿ ಒಬ್ಬರಿಗೂ ಒಂದೇ ಒಂದು ಸೈಟು, ಮನೆ, ರೈತರಿಗೆ ಭೂಮಿ ಕೊಟ್ಟಿಲ್ಲ. ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಒಂದೇ ಒಂದು ಸಹಾಯ ಮಾಡಿಲ್ಲ. ಜೆಡಿಎಸ್ ಅನ್ನು ಬಿಜೆಪಿ ಜೊತೆ ವಿಲೀನ ಮಾಡಿದರೆ ಈ ದೇಶ ಹಾಗೂ ರಾಜ್ಯಕ್ಕೆ ಒಳ್ಳೆಯದು ಎಂದರು.
ಎಸ್.ಎಂ.ಕೃಷ್ಣ ಅವರನ್ನು ನೆನೆಸಿಕೊಂಡಿರುವ ಕುಮಾರಸ್ವಾಮಿ ಅವರೇ ಅವರ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇದೆಯೇ,ನೀನು ಪಾದಯಾತ್ರೆ ಮಾಡುತ್ತಿರುವ ರಸ್ತೆ ಕೃಷ್ಣ ಅವರು ಮಾಡಿದ್ದು. ಈ ರೀತಿಯ ಒಂದೇ ಒಂದು ಕೆಲಸ ಮಾಡಿದ್ದೀಯಾ. ಸೋಮನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಮಾಡಿಸಿದ್ದಾರೆ. ಅವರಂತೆ ನಿನಗೆ ಮಾಡಲು ಆಗುತ್ತದೆಯೇ, ಕೇವಲ ಖಾಲಿ, ಬುಡಬುಡಕೆ ಮಾತುಗಳು ಬೇಡ” ಎಂದರು.
10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆಯುತ್ತೇವೆ ಎಂದು ಹೇಳುತ್ತಿರುವ ಕುಮಾರಸ್ವಾಮಿ. ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ. ಸರ್ಕಾರ ಒಡೆದುಹಾಕಲು ಇದೇನು ಮಡಕೆಯೇ ಕಾಂಗ್ರೆಸ್ ಹೋರಾಟಕ್ಕೆ ನಿನ್ನ ಕ್ಷೇತ್ರದ ಹೆಬ್ಬಾಗಿಲಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ. ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇವುಗಳನ್ನು ನಿಲ್ಲಿಸಬೇಕು ಎನ್ನುವ ಹುನ್ನಾರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಕುಮಾರಸ್ವಾಮಿ, ವಿಜಯೇಂದ್ರ ಯಡಿಯೂರಪ್ಪ, ಆರ್.ಅಶೋಕ್, ಎಲ್ಲಾ ಸೇರಿ ಗ್ಯಾರಂಟಿ ವಿರುದ್ದ ಕತ್ತಿ ಮಸೆಯುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ್, ಕೆ.ಎನ್.ರಾಜಣ್ಣ,ಡಾ.ಎಂ.ಸಿ. ಸುಧಾಕರ್, ಮಧು ಬಂಗಾರಪ್ಪ, ಶಾಸಕ ಕದಲೂರು ಉದಯ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ,ಕೆ.ಎಂ.ಉದಯ್, ರಮೇಶ ಬಂಡಿಸಿದ್ದೇಗೌಡ, ಪಿ. ರವಿಕುಮಾರ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್, ಮತ್ತಿತರರಿದ್ದರು.