ಮನೆ ಕಾನೂನು ಕಾನೂನು ನೆರವು ನಿರಾಕರಿಸಿದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್: ಖುದ್ದು ವಾದ ಮಂಡನೆಗೆ ನಿರ್ಧಾರ

ಕಾನೂನು ನೆರವು ನಿರಾಕರಿಸಿದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್: ಖುದ್ದು ವಾದ ಮಂಡನೆಗೆ ನಿರ್ಧಾರ

0

ಭಯೋತ್ಪಾದನೆಗೆ ನಿಧಿ ಸಂಗ್ರಹಿಸಿದ ಆರೋಪದಡಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ತಮ್ಮ ಆಯ್ಕೆಯ ವಕೀಲರನ್ನು ನೇಮಿಸಿಕೊಳ್ಳಲು ದೆಹಲಿ ಹೈಕೋರ್ಟ್ ನೀಡಿದ್ದ ಸಲಹೆಯನ್ನು ಮಲಿಕ್‌ ಶುಕ್ರವಾರ ನಿರಾಕರಿಸಿದ್ದಾರೆ.

Join Our Whatsapp Group

ಪ್ರಕರಣದಲ್ಲಿ ಖುದ್ದು ವಾದ ಮಂಡಿಸುವುದಾಗಿ ಮಲಿಕ್ ಅವರು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಗಿರೀಶ್ ಕತ್ಪಾಲಿಯಾ ಅವರಿದ್ದ  ವಿಭಾಗೀಯ ಪೀಠಕ್ಕೆ ತಿಳಿಸಿದರು.

ಪ್ರಕರಣದಲ್ಲಿ ವಾದಿಸಲು ತಮ್ಮ ಆಯ್ಕೆಯ ವಕೀಲರನ್ನು ಮಲಿಕ್ ನೇಮಿಸಿಕೊಳ್ಳಬಹುದು ಇಲ್ಲವೇ ಅಮಿಕಸ್ ಕ್ಯೂರಿ ಅವರನ್ನು ನೇಮಿಸಬಹುದು ಎಂದು ಹೈಕೋರ್ಟ್‌ ಈ ಹಿಂದೆ ನೀಡಿದ್ದ ಎರಡೂ ಸಲಹೆಗಳನ್ನು ಅವರು ನಿರಾಕರಿಸಿದರು.

ಆದರೆ, ಇಂದು ವೀಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಮಲಿಕ್ ಅವರು ಯಾವುದೇ ವಕೀಲರು ತಮ್ಮನ್ನು ಪ್ರತಿನಿಧಿಸುವುದನ್ನು ಬಯಸುವುದಿಲ್ಲ ಎಂದರು.

“ವಿಚಾರಣಾ ನ್ಯಾಯಾಲಯದಲ್ಲಿ ನಾನೇ ವಾದ ಮಾಡಿದ್ದೆ. ಈ ಪ್ರಕರಣದ ಬಗ್ಗೆ ನನಗೆ ಹೆಚ್ಚು ತಿಳಿದಿರುವ ಕಾರಣ ನಾನೇ ವಾದ ಮಾಡುತ್ತೇನೆ. ನಾನು ಖುದ್ದು ವಾದಿಸುತ್ತೇನೆ. ವಿಚಾರಣಾ ನ್ಯಾಯಾಲಯದಲ್ಲಿ ನಾನು ಯಾವುದೇ ವಕೀಲರನ್ನು ನೇಮಿಸಿಕೊಂಡಿರಲಿಲ್ಲ. ಇಲ್ಲಿಯೂ ನನಗೆ ಯಾವುದೇ ವಕೀಲರು ಬೇಡ” ಎಂದು ಅವರು ಹೇಳಿದರು.

ಅಲ್ಲದೆ ತಾನು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಬಯಸುತ್ತೇನೆಯೇ ವಿನಾ ವೀಡಿಯೊ ಕಾನ್ಫರೆನ್ಸ್‌ ಮೂಲಕ ಅಲ್ಲ ಎಂದು ಒತ್ತಿ ಹೇಳಿದರು. ಆದರೆ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬಾರದು ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ನ್ಯಾಯಾಲಯ ಪ್ರಸಾಪಿಸಿತು. ಅಗತ್ಯವಿದ್ದರೆ ಮಲಿಕ್‌ ಅವರು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಹೈಕೋರ್ಟ್‌ ತಿಳಿಸಿತು.

ಆದರೆ ಹಾಗೆ ಮಾಡಲು ತನಗೆ ಒಲವಿಲ್ಲ ಎಂದು ಮಲಿಕ್‌ ತಿಳಿಸಿದರು. ಅಲ್ಲದೆ ಎನ್‌ಐಎ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಅವರು ನಿರಾಕರಿಸಿದ್ದನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಮುಂದಿನ ವಿಚಾರಣೆಯ ದಿನದಂದು ನ್ಯಾಯಾಲಯಕ್ಕೆ ತಿಳಿಸಬಹುದು ಎಂದು ಅದು ಹೇಳಿತು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 15ರಂದು ನಡೆಯಲಿದೆ.