ಮನೆ ಮನರಂಜನೆ ‘ಶಾಖಾಹಾರಿ’ ಸಿನಿಮಾಗೆ ರಂಗಾಯಣ ರಘು ಹೀರೋ: ಟೈಟಲ್​ ಪೋಸ್ಟರ್​ ರಿಲೀಸ್

‘ಶಾಖಾಹಾರಿ’ ಸಿನಿಮಾಗೆ ರಂಗಾಯಣ ರಘು ಹೀರೋ: ಟೈಟಲ್​ ಪೋಸ್ಟರ್​ ರಿಲೀಸ್

0

ನಟ ರಂಗಾಯಣ ರಘು ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ‘ಶಾಖಾಹಾರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್​ ಪೋಸ್ಟರ್​ ಅನ್ನು ಯೋಗರಾಜ್​ ಭಟ್​ ಬಿಡುಗಡೆ ಮಾಡಿದ್ದಾರೆ.

ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಅವರು ಜೊತೆಗೂಡಿ ‘ಕೀಳಂಬಿ ಮೀಡಿಯಾ ಲ್ಯಾಬ್’ ಸಂಸ್ಥೆಯ ಮೂಲಕ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ‘ಶಾಖಾಹಾರಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ.

ಮಲೆನಾಡಿನ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಒಂದಷ್ಟು ನಿಗೂಢ ಘಟನೆಗಳ ಸುತ್ತಮುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಹೋಟೆಲ್ ​ನಲ್ಲಿ ಅಡುಗೆ ಮಾಡುವ ಭಟ್ಟನಾಗಿ ರಂಗಾಯಣ ರಘು ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಕೂಡ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ವಿಶ್ವಜಿತ್ ರಾವ್ ಅವರು ‘ಶಾಖಾಹಾರಿ’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ, ಶಶಾಂಕ್ ನಾರಾಯಣ ಅವರ ಸಂಕಲನ, ಮಯೂರ್ ಅಂಬೆಕಲ್ಲು ಅವರ ಸಂಗೀತದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಆಶಿಕ್ ಕುಸುಗೊಳ್ಳಿ ಅವರು ಗ್ರೇಡಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಪೂರ್ತಿ ಮಲೆನಾಡಿನಲ್ಲೇ ಚಿತ್ರೀಕರಣ ಆಗಿರುವ ‘ಶಾಖಾಹಾರಿ’ ಸಿನಿಮಾದಲ್ಲಿ ಮಲೆನಾಡಿನ ಅನೇಕರು ಕೆಲಸ ಮಾಡಿದ್ದಾರೆ ಎಂಬುದು ವಿಶೇಷ.

ರಂಗಾಯಣ ರಘು ಅವರ ಈ ಹಿಂದಿನ ಸಿನಿಮಾಗಳಿಂದ ‘ಶಾಖಾಹಾರಿ’ ಚಿತ್ರ ಸಖತ್​ ಡಿಫರೆಂಟ್​ ಆಗಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಂದೀಪ್ ಸುಂಕದ್ ಅವರು ಈ ಸಿನಿಮಾಗೆ ನಿರ್ದೇಶ ಮಾಡಿದ್ದಾರೆ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅನುಭವ ಅವರಿಗೆ ಇದೆ. ಸಹ-ನಿರ್ದೇಶಕನಾಹಗಿ, ಬರಹಗಾರರಾಗಿ ಅವರು ಅನುಭವ ಪಡೆದಿದ್ದಾರೆ. ‘ಶಾಖಾಹಾರಿ’ ಚಿತ್ರಕ್ಕೆ ಸಂದೀಪ್ ಸುಂಕದ್ ಅವರೇ ಕಥೆ ಬರೆದಿದ್ದಾರೆ.

ಹಿಂದಿನ ಲೇಖನಇಡೀ ದೇಶ ಸದೃಢವಾಗಲು ಮಹಿಳೆಯರು ಕಾರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಮುಂದಿನ ಲೇಖನಸೆಪ್ಟೆಂಬರ್ 1ರಂದು ದಸರಾ ಗಜ ಪಯಣ – 2023 ಕ್ಕೆ ಚಾಲನೆ