ಮನೆ ಕಾನೂನು ಮಹಿಳೆಯರ ವಿರುದ್ಧವೂ ಲೈಂಗಿಕ ಪ್ರವೇಶಿಕೆ ದೌರ್ಜನ್ಯದ ಪೋಕ್ಸೊ ಪ್ರಕರಣ ದಾಖಲಿಸಬಹುದು: ದೆಹಲಿ ಹೈಕೋರ್ಟ್

ಮಹಿಳೆಯರ ವಿರುದ್ಧವೂ ಲೈಂಗಿಕ ಪ್ರವೇಶಿಕೆ ದೌರ್ಜನ್ಯದ ಪೋಕ್ಸೊ ಪ್ರಕರಣ ದಾಖಲಿಸಬಹುದು: ದೆಹಲಿ ಹೈಕೋರ್ಟ್

0

ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆಯಡಿ (ಪೋಕ್ಸೊ ಕಾಯಿದೆ) ಪುರುಷ ಮತ್ತು ಮಹಿಳೆ ಇಬ್ಬರ ವಿರುದ್ಧವೂ ‘ಲೈಂಗಿಕ ಪ್ರವೇಶಿಕೆ ದೌರ್ಜನ್ಯ’ದ (ಪೆನೆಟ್ರೇಟಿವ್‌ ಸೆಕ್ಷುಯಲ್‌ ಅಸಾಲ್ಟ್‌) ಅಪರಾಧ ಹೊರಿಸಬಹುದಾಗಿದೆ ಎಂದು ದೆಹಲಿ ಹೈಕೋರ್ಟ್‌ ಈಚೆಗೆ ಹೇಳಿದೆ.

Join Our Whatsapp Group

ಪೋಕ್ಸೊ ಸೆಕ್ಷನ್‌ಗಳನ್ನು ಒಟ್ಟಾರೆಯಾಗಿ ಓದಿದಾಗ ಪೋಕ್ಸೊ ಕಾಯಿದೆಯ ಸೆಕ್ಷನ್  3ರಲ್ಲಿ ಇರುವ ʼಅವನುʼ ಎಂಬ ಸರ್ವನಾಮ ಕೇವಲ ಪುರುಷ ಆರೋಪಿ ಎಂಬ ನಿರ್ಬಂಧಿತ ಅರ್ಥ ಪಡೆಯುವುದಿಲ್ಲ ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಆ ಪದ ಯಾವುದೇ ಅಪರಾಧಿಯನ್ನು ಅವರ ಲಿಂಗ ಆಧರಿಸದೆ ಅಪರಾಧಿ ಎಂದು ಪರಿಗಣಿಸುತ್ತದೆ ಎಂಬುದಾಗಿ ಅರ್ಥೈಸಿಕೊಳ್ಳುವಂತೆ ಹೇಳುತ್ತದೆ ಎಂದಿರುವ ನ್ಯಾಯಾಲಯ ಪುರುಷ ಎಂಬ ಪದ ಇರುವುದರಿಂದ ಅದು ಮಹಿಳೆಗೆ ಅನ್ವಯವಾಗುವುದಿಲ್ಲ ಎಂದು ಹೇಳುವ ಮೂಲಕ ಶಾಸಕಾಂಗವು ಕಾಯಿದೆಯನ್ನು ರೂಪಿಸಿದ ಧ್ಯೇಯೋದ್ದೇಶಗಳನ್ನು ಅವಹೇಳನ ಮಾಡಬಾರದು ಎಂದು ಎಚ್ಚರಿಸಿದೆ.

ಈ ಸೆಕ್ಷನ್‌ ದೇಹದಲ್ಲಿ ಯಾವುದೇ ವಸ್ತುವನ್ನು ಲೈಂಗಿಕವಾಗಿ ಪ್ರವೇಶಿಸುವ ಮೂಲಕ ನಡೆಸುವ ಲೈಂಗಿಕ ಕ್ರಿಯೆಯ ಬಗ್ಗೆ ಹೇಳುವುದರಿಂದ ಕೇವಲ ಶಿಶ್ನ ಸಂಭೋಗಕ್ಕೆ ಅಪರಾಧ ಸೀಮಿತಗೊಳಿಸಲಾಗಿದೆ ಎನ್ನುವುದು ತರ್ಕಬದ್ಧವಲ್ಲ ಎಂಬುದಾಗಿ ಪೀಠ ವಿವರಿಸಿತು.

“ಐಪಿಸಿ ಸೆಕ್ಷನ್ 375ರಲ್ಲಿ ಅಪರಾಧದ ಗಂಭೀರತೆಯನ್ನು ರೂಪಿಸುವ ಕೃತ್ಯಗಳು ಪೋಕ್ಸೊ ಕಾಯಿದೆಯ 3 ಮತ್ತು 5 ರಂತೆಯೇ ಇದ್ದರೂ, ಸೆಕ್ಷನ್ 375ರ ಆರಂಭಿಕ ಸಾಲು ನಿರ್ದಿಷ್ಟವಾಗಿ “ಪುರುಷ” ಎಂದು ಸೂಚಿಸುತ್ತದೆ. ಆದರೆ ಪೋಕ್ಸೊ ಕಾಯಿದೆಯ ಸೆಕ್ಷನ್‌ 3 “ವ್ಯಕ್ತಿ” ಎಂದು ಹೇಳುತ್ತದೆ.  ಐಪಿಸಿಯ ಸೆಕ್ಷನ್ 375 ರಲ್ಲಿ ಕಂಡುಬರುವ “ಪುರುಷ” ಪದದ ವ್ಯಾಪ್ತಿ ಮತ್ತು ಅರ್ಥವು ಪ್ರಸ್ತುತ ಪ್ರಕ್ರಿಯೆಯಲ್ಲಿ ಈ ನ್ಯಾಯಾಲಯದ ಪರಿಗಣನೆಯಲ್ಲಿಲ್ಲ. ಆದರೆ ಪೋಕ್ಸೊ ಕಾಯಿದೆಯ ಸೆಕ್ಷನ್ 3ರಲ್ಲಿರುವ “ವ್ಯಕ್ತಿ” ಎಂಬ ಪದವನ್ನು ಕೇವಲ “ಪುರುಷ” ಎಂದು ಉಲ್ಲೇಖಿಸಲು ಯಾವುದೇ ಕಾರಣವಿಲ್ಲ. ಅದರಂತೆ ಪೋಕ್ಸೊ ಕಾಯಿದೆಯ ಸೆಕ್ಷನ್ 3 ಮತ್ತು 5ರಲ್ಲಿ ಉಲ್ಲೇಖಿಸಲಾದ ಪದ ಅಪರಾಧಿಯ ಲಿಂಗವನ್ನು ಲೆಕ್ಕಿಸದೆ ಮಕ್ಕಳ ಮೇಲೆ ನಡೆಸುವ ಕೃತ್ಯವನ್ನು ಅಪರಾಧ ಎಂದು ಪರಿಗಣಿಸುವಂತೆ ಸೂಚಿಸುತ್ತದೆ” ಎಂಬುದಾಗಿ ನ್ಯಾಯಾಲಯ ನುಡಿದಿದೆ.

ಪೋಕ್ಸೊ ಕಾಯಿದೆಯ ಸೆಕ್ಷನ್‌ 3 ಮತ್ತು 5ರಲ್ಲಿ ಉಲ್ಲೇಖಿಸಿರುವಂತೆ ತಾನು ಶಿಶ್ನ ಸಂಭೋಗದ ಅಪರಾಧ ಮಾಡಿಲ್ಲ. ಸೆಕ್ಷನ್‌ಗಳ ವ್ಯಾಖ್ಯಾನ ʼಅವನುʼ ಎಂಬ ಸರ್ವನಾಮವನ್ನು ಬಳಸುವುದರಿಂದ ಕಾಯಿದೆಯನ್ನು ಸ್ತ್ರೀ ವಿರುದ್ಧ ಪ್ರಯೋಗಿಸುವಂತಿಲ್ಲ ಎಂದು ಸುಂದರಿ ಗೌತಮ್‌ ಎಂಬ ಮಹಿಳೆ ವಾದಿಸಿದ್ದರು. 

ಆದರೆ ವಾದ ತಿರಸ್ಕರಿಸಿದ ನ್ಯಾಯಾಲಯ ಮಹಿಳೆ ವಿರುದ್ಧ ಈ ಸೆಕ್ಷನ್‌ಗಳಡಿ ನಿಗದಿಪಡಿಸಲಾಗಿದ್ದ ಆರೋಪಗಳನ್ನು ಎತ್ತಿ ಹಿಡಿಯಿತು.