ಮನೆ ಅಂತಾರಾಷ್ಟ್ರೀಯ ಶೇಖ್ ಹಸೀನಾಳನ್ನು ಹಸ್ತಾಂತರಿಸದಿದ್ದರೆ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ

ಶೇಖ್ ಹಸೀನಾಳನ್ನು ಹಸ್ತಾಂತರಿಸದಿದ್ದರೆ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ

0

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ವಿರುದ್ಧ ಬಿಎನ್‌ಪಿ ಸೇರಿದಂತೆ ಬಾಂಗ್ಲಾದೇಶದ ವಿರೋಧ ಪಕ್ಷಗಳು ಸಿಟ್ಟಿಗೆದ್ದಿವೆ.

Join Our Whatsapp Group

ಬಿಎನ್​​ಪಿ ಪ್ರಸ್ತುತ ಮಧ್ಯಂತರ ಸರ್ಕಾರದಲ್ಲಿ ಪ್ರಬಲ ಪ್ರಭಾವ ಹೊಂದಿದೆ. ಗಣ ಅಧಿಕಾರ್ ಪರಿಷತ್ ಅಧ್ಯಕ್ಷ ವಿಪಿ ನೂರುಲ್ ಹಕ್ ನೂರ್ ಅವರು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದು, ಆಕೆಯನ್ನು ಕೂಡಲೇ ಬಾಂಗ್ಲಾದೇಶಕ್ಕೆ ಹಸ್ತಾಂತರಿಸದಿದ್ದರೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಕಳೆದ ಶುಕ್ರವಾರ (ಆಗಸ್ಟ್ 9) ಢಾಕಾದಲ್ಲಿ ನಡೆದ ‘ಸಾಮರಸ್ಯ ರ‍್ಯಾಲಿ’ಯಲ್ಲಿ ಮಾತನಾಡಿದ ಅವರು, ‘ಭಾರತದೊಂದಿಗೆ ಕೈದಿಗಳ ವಿನಿಮಯ ಒಪ್ಪಂದ ಮಾಡಿಕೊಂಡಿದ್ದೇವೆ. ಶೇಖ್ ಹಸೀನಾಳನ್ನು ಬೇರೆ ದೇಶಗಳಿಗೆ ಕಳುಹಿಸುವ ಬದಲು ಕೂಡಲೇ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಭಾರತೀಯ ಹೈಕಮಿಷನರ್ ಅವರನ್ನು ಪೀಪಲ್ಸ್ ರೈಟ್ಸ್ ಕೌನ್ಸಿಲ್ ಸುತ್ತುವರೆದಿರುತ್ತದೆ ಎಂದಿದ್ದಾರೆ.

ಅಂದಹಾಗೆ, ಪೀಪಲ್ಸ್ ರೈಟ್ಸ್ ಕೌನ್ಸಿಲ್ ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಪಕ್ಷವಾಗಿದೆ. 2022 ರಲ್ಲಿ ರೆಜಾ ಕಿಬ್ರಿಯಾ ಮತ್ತು ನೂರುಲ್ ಹಕ್ ನೂರ್ ಅವರ ನೇತೃತ್ವದಲ್ಲಿ ರಚನೆಯಾದ ಪಕ್ಷವಿದು. 2018 ರಲ್ಲಿ ಬಾಂಗ್ಲಾದೇಶದಲ್ಲಿ ಕೋಟಾ ಸುಧಾರಣಾ ಚಳವಳಿಯ ಪ್ರಮುಖ ಮುಂದಾಳುಗಳಾಗಿದ್ದಾರೆ ಇವರು. ಈ ಬಾರಿಯೂ ಕೋಟಾ ವಿರೋಧಿ ಆಂದೋಲನಕ್ಕೆ ಗಣ ಅಧಿಕಾರ ಪರಿಷತ್ತು ಮೊದಲಿನಿಂದಲೂ ಬೆಂಬಲ ನೀಡಿತ್ತು. ಆದ್ದರಿಂದ, ಉಸ್ತುವಾರಿ ಸರ್ಕಾರದಲ್ಲಿಯೂ ಅವರಿಗೆ ಸಾಕಷ್ಟು ಪ್ರತಿಷ್ಠೆ ಇದೆ. ಆದರೆ, ನೂರ್ ತುಂಬ ನಿಗೂಢ ಪಾತ್ರ. ಕಳೆದ ವರ್ಷ ಜನವರಿಯಲ್ಲಿ ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ, ಅವರು ದುಬೈನಲ್ಲಿ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಏಜೆಂಟ್‌ನೊಂದಿಗೆ ಭೇಟಿಯಾಗುತ್ತಿರುವುದು ಕಂಡುಬಂದಿದೆ.

ಶೇಖ್ ಹಸೀನಾಳನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕೆಂದು ಅವರು ಒತ್ತಾಯಿಸಿದ್ದಲ್ಲದೆ, ಬಾಂಗ್ಲಾದೇಶದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪದ ಬಗ್ಗೆ ನೂರುಲ್ ಹಕ್ ನೂರ್ ಗಂಭೀರ ದೂರು ನೀಡಿದರು. ಶುಕ್ರವಾರದ ಸಭೆಯಲ್ಲಿ, 2014, 2018 ಮತ್ತು 2024 ರ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತವು ಶೇಖ್ ಹಸೀನಾ ಅವರನ್ನು ಏಕಾಂಗಿಯಾಗಿ ಬೆಂಬಲಿಸಿದೆ ಎಂದು ಅವರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ‘ಇಡೀ ವಿಶ್ವವೇ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಮಾತನಾಡುತ್ತಿದ್ದರೂ ಭಾರತ ಹಸೀನಾಳನ್ನು ಅಧಿಕಾರಕ್ಕೆ ತರಲು ಹವಣಿಸುತ್ತಿದೆ. ನಮ್ಮ ನೆರೆಯ ಭಾರತಕ್ಕೆ ನಾನು ಹೇಳುತ್ತೇನೆ, ನೀವು ನಮ್ಮೊಂದಿಗೆ ಸಾಮಾನ್ಯ ಸಂಬಂಧವನ್ನು ಇಟ್ಟುಕೊಳ್ಳಬೇಕು. ಇದಕ್ಕಾಗಿ ಸಂಬಂಧವನ್ನು ಹಾಳು ಮಾಡಬೇಡಿ.” ಎಂದು ಗಣ ಅಧಿಕಾರ್ ಪರಿಷತ್ ಅಧ್ಯಕ್ಷರು ಹೇಳಿದ್ದಾರೆ.