ಮನೆ ರಾಷ್ಟ್ರೀಯ ಭಯೋತ್ಪಾದನೆ ಆರ್ಥಿಕ ನೆರವು: ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

ಭಯೋತ್ಪಾದನೆ ಆರ್ಥಿಕ ನೆರವು: ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

0

ನವದೆಹಲಿ (New Delhi)-ಭಯೋತ್ಪಾದನೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಎನ್ಐಎ ಕೋರ್ಟ್ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಜೊತೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಎನ್ಐಎ ಕೋರ್ಟ್ ಮೇ 19 ರಂದು ಯಾಸಿನ್ ಮಲಿಕ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ತೀರ್ಪು ಪ್ರಕಟಿಸಿದ ಕೋರ್ಟ್ ಉಗ್ರರಿಗೆ ಆರ್ಥಿಕ ನೆರವು ನೀಡಿದ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಇದಕ್ಕೂ ಮುನ್ನ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ರಾಷ್ಟ್ರೀಯ ತನಿಖಾ ಆಯೋಗ(NIA) ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾಯಾಲಯ ನೇಮಿಸಿದ ಅಮಿಕಸ್ ಕ್ಯೂರಿ, ಕನಿಷ್ಠ ಶಿಕ್ಷೆಯಾದ ಜೀವಾವಧಿ ಶಿಕ್ಷೆಯನ್ನು ನೀಡುವಂತೆ ಕೋರಿದರು.

ಈ ಮಧ್ಯೆ, ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಬಿಡುತ್ತಿದ್ದೇನೆ ಎಂದು ಮಲಿಕ್ ನ್ಯಾಯಾಧೀಶರಿಗೆ ತಿಳಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ಜೀವಾವಧಿ ಶಿಕ್ಷೆ ನೀಡಿದೆ.

ಬುರ್ಹಾನ್ ವಾನಿ ಎನ್‌ಕೌಂಟರ್ ಆದ 30 ನಿಮಿಷಗಳಲ್ಲಿ ನನ್ನನ್ನು ಬಂಧಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಪಾಸ್‌ಪೋರ್ಟ್ ಮಂಜೂರು ಮಾಡಿದರು ಮತ್ತು ನಾನು ಕ್ರಿಮಿನಲ್ ಅಲ್ಲದ ಕಾರಣ ಹೇಳಿಕೆ ನೀಡಲು ಭಾರತ ನನಗೆ ಅವಕಾಶ ಮಾಡಿಕೊಟ್ಟಿತು ಎಂದು ಯಾಸಿನ್ ಮಲಿಕ್ ನ್ಯಾಯಾಲಯದಲ್ಲಿ ಹೇಳಿದರು.

1994 ರಲ್ಲಿ ಶಸ್ತ್ರಾಸ್ತ್ರ ತ್ಯಜಿಸಿದಾಗಿನಿಂದ ತಾನು ಮಹಾತ್ಮ ಗಾಂಧಿಯವರ ತತ್ವಗಳನ್ನು ಅನುಸರಿಸುತ್ತಿದ್ದೇನೆ. ಅಂದಿನಿಂದ ನಾನು ಕಾಶ್ಮೀರದಲ್ಲಿ ಅಹಿಂಸಾತ್ಮಕ ರಾಜಕೀಯವನ್ನು ಮಾಡುತ್ತಿದ್ದೇನೆ. ಏಳು ಪ್ರಧಾನಿಗಳೊಂದಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡ ಮಲಿಕ್, ಕಳೆದ 28 ವರ್ಷಗಳಲ್ಲಿ ಯಾವುದೇ ಭಯೋತ್ಪಾದನಾ ಚಟುವಟಿಕೆಗಳು ಅಥವಾ ಹಿಂಸಾಚಾರದಲ್ಲಿ ಭಾಗಿಯಾಗಿದ್ದರೆ ಅದನ್ನು ತೋರಿಸಲಿ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಸವಾಲು ಹಾಕಿದರು. ಒಂದು ವೇಳೆ ಆರೋಪ ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಮತ್ತು ಮರಣದಂಡನೆಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.