ಮೈಸೂರು: ದಕ್ಷಿಣಕಾಶಿ ನಂಜನಗೂಡು ತಾಲ್ಲೂಕು ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಅನುಷ್ಟಾನಿಸಿರುವ ಅಮೃತ ಸರೋವರ ಕೆರೆಗಳ ದಂಡೆಯಲಿ ಧ್ವಜಾರೋಹಣ ನೆರವೇರಿಸುವ ಮೂಲಕ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ.
ಬಿಳಿಗೆರೆ ಗ್ರಾಮ ಪಂಚಾಯಿತಿಯ ಕಾಮಹಳ್ಳಿ ಕೆರೆ , ಮಲ್ಲೂಪುರ ಗ್ರಾಮ ಪಂಚಾಯಿತಿಯ ಸೋನಹಳ್ಳಿ ಕೆರೆ, ಕೋಣನೂರು ಗ್ರಾಮ ಪಂಚಾಯಿತಿಯ ಪಿ.ಮರಹಳ್ಳಿ ಒಟ್ಟರಕಟ್ಟೆ ಹಾಗೂ ಶಿರಮಳ್ಳಿ ಗ್ರಾಮ ಪಂಚಾಯಿತಿಯ ಹುಸ್ಕೂರು ಚಿಕ್ಕ ಕೆರೆ ದಂಡೆಯಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಧ್ವಜಾರೋಹಣ ನೆರವೇರಿಸಿದರು.
ಮಲ್ಲೂಪುರ ಗ್ರಾಮ ಪಂಚಾಯಿತಿಯ ಸೋನಹಳ್ಳಿ ಅಮೃತ ಸರೋವರ ಕೆರೆ ದಂಡೆಯಲಿ ಧ್ಜಜಾರೋಹಣ ನೆರವೇರಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಮಲ ಅವರು ಮಾತನಾಡಿದರು. ಸರ್ಕಾರದ ಪ್ರತಿಷ್ಟಿತ ಯೋಜನೆಗಳಲ್ಲಿ ಒಂದಾದ ನರೇಗಾ ಯೋಜನೆ ಅಡಿ ಗ್ರಾಮದಲ್ಲಿ ಅಮೃತ ಸರೋವರ ಕೆರೆ ಅನುಷ್ಟಾನಗೊಂಡಿರುವುದು ಜನ-ಜಾನುವಾರುಗಳಿಗೆ ಅನುಕೂಲಕರವಾಗಲಿದೆ. ಜೊತೆಗೆ ಈ ಭಾಗದ ರೈತರಿಗೂ ಅನುಕೂಲವಾಗಲಿದ್ದು, ಸುತ್ತಮುತ್ತಲಿನ ಜಮೀನುಗಳು ಸಮೃದ್ಧಗೊಳ್ಳಲು ನೆರವಾಗಲಿದೆ. ಇಂತಹ ಕೆರೆ ದಂಡೆಯಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿರುವುದು ಹೆಮ್ಮೆಯ ವಿಷಯವಾಗಿದೆ. ನರೇಗಾ ಯೋಜನೆ ಅಡಿ ಇನ್ನಷ್ಟು ಕೆರೆ-ಕಟ್ಟೆಗಳು ಅಭಿವೃದ್ಧಿಗೊಳ್ಳಲಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಶಾಲಾ ಶಿಕ್ಷರು, ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಹಾಯಕ ಇಂಜಿನಿಯರ್ ಗಳು, ಬಿ.ಎಫ್.ಟಿ ಗಳು, ಪಂಚಾಯಿತಿ ಇತರೆ ಸಿಬ್ಬಂದಿ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.