ಕೊಲೆ ಪ್ರಕರಣದಲ್ಲಿ 13 ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಈಚೆಗೆ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ.
ಬೆಂಗಳೂರಿನ 32ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಶಿವಪ್ರಸಾದ್ ಎಂಬುವರನ್ನು ದರೋಡೆ ಆರೋಪದಿಂದ ಖುಲಾಸೆಗೊಳಿಸಿ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ರೂ.10 ಸಾವಿರ ರೂಪಾಯಿ ದಂಡ ವಿಧಿಸಿ 2019ರ ಮಾರ್ಚ್ 19ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಶಿವಪ್ರಸಾದ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್ ರಾಚಯ್ಯ ಅವರಿದ್ದ ವಿಭಾಗೀಯ ಪೀಠವು ಪ್ರಕಟಿಸಿದೆ.
“ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದ್ದು, ಇತರ ಯಾವುದೇ ಪ್ರಕರಣಗಳಲ್ಲಿ ಶಿವಪ್ರಸಾದ್ ಬಂಧನದ ಅಗತ್ಯವಿಲ್ಲ ಎಂದಾದರೆ ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು. ನ್ಯಾಯದಾನ ಹಳಿ ತಪ್ಪದಂತೆ ನೋಡಿಕೊಳ್ಳುವುದು ನ್ಯಾಯಾಲಯಗಳ ಪರಮೋಚ್ಚ ಉದ್ದೇಶವಾಗಿದೆ. ಇಲ್ಲವಾದರೆ ತಪ್ಪಿತಸ್ಥರು ಖುಲಾಸೆಯಾಗುವ ಹಾಗೂ ಅಮಾಯಕರು ಶಿಕ್ಷೆಗೆ ಗುರಿಯಾಗುವ ಅಪಾಯವಿರುತ್ತದೆ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
“ಲಾಭದ ಉದ್ದೇಶದಿಂದ ಶಿವಪ್ರಸಾದ್ ಕೊಲೆ ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ದರೋಡೆ ಸಾಬೀತುಪಡಿಸಲು ಪುರಾವೆ ಇಲ್ಲ ಎಂಬ ಕಾರಣಕ್ಕೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 392 ಮತ್ತು 397ರ ಅಡಿಯ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಆದರೆ, ಕೊಲೆ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ, ಆತ ಲಾಭಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದು ಐಪಿಸಿ ಸೆಕ್ಷನ್ 302ರಡಿ ಜೀವಾವಧಿ ಶಿಕ್ಷೆ ವಿಧಿಸಿರುವುದು ಸರಿಯಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ದರೋಡೆ ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದರೂ ಪ್ರಾಸಿಕ್ಯೂಷನ್ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ. ಆದ್ದರಿಂದ, ಆ ಆದೇಶವೇ ಅಂತಿಮಗೊಂಡಂತಾಗಿದೆ. ಒಮ್ಮೆ ಆರೋಪಿ ದರೋಡೆ ಪ್ರಕರಣದಲ್ಲಿ ಖುಲಾಸೆಗೊಂಡರೆ ಆತನ ವಿರುದ್ಧದ ಕೊಲೆ ಪ್ರಕರಣದಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಕ್ಷ್ಯ ಒದಗಿಸುವುದು ಪ್ರಾಸಿಕ್ಯೂಷನ್ ಹೊಣೆಯಾಗಿರುತ್ತದೆ. ಆದರೆ, ಈ ಹೊಣೆ ನಿಭಾಯಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ವಿಚಾರಣಾಧೀನ ನ್ಯಾಯಾಲಯ ಸಹ ಸಾಕ್ಷಾೃಧಾರವಿಲ್ಲದ ಹೊರತಾಗಿಯೂ ಆರೋಪಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ಬೇಸರಿಸಿದೆ.
ಪ್ರಕರಣದ ಹಿನ್ನೆಲೆ: ಎಚ್‌ಆರ್‌ಬಿಆರ್ ಬಡಾವಣೆಯಲ್ಲಿ ತುಳಸಿ (46) ಎಂಬುವರು ಪುತ್ರ ಹಾಗೂ ಪುತ್ರಿ ಜತೆ ವಾಸವಾಗಿದ್ದರು. ಅವರ ಪತಿ ರವಿಶಂಕರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ತುಳಸಿ ಅವರ ನೆರೆಮನೆಯಲ್ಲಿ ರಾಮಸ್ವಾಮಿ ಎಂಬುವರು ವಾಸವಿದ್ದರು. ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್, ತುಳಸಿ ಮತ್ತವರ ಪತಿಯ ವಿಶ್ವಾಸ ಗಳಿಸಿದ್ದರು. ಪತಿ ವಿದೇಶದಲ್ಲಿದ್ದರಿಂದ ತುಳಸಿ ಹೊರ ಹೋಗಬೇಕಾದ ಸಂದರ್ಭದಲ್ಲಿ ಆರೋಪಿಯ ಕಾರಿನಲ್ಲಿ ಹೋಗಿ ಬರುತ್ತಿದ್ದರು. ಈ ವೇಳೆ ತುಳಸಿ ಮೈಮೇಲಿದ್ದ ಆಭರಣಗಳನ್ನು ಗಮನಿಸಿದ್ದ ಶಿವಪ್ರಸಾದ್ ದರೋಡೆಗೆ ಸಂಚು ರೂಪಿಸಿದ್ದರು. ಅಂತೆಯೇ, 2008ರ ಜೂನ್ 27ರ ಬೆಳಗ್ಗೆ ತುಳಸಿ ಅವರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿದ್ದಲ್ಲದೆ, ಆಕೆಯನ್ನು ಕೊಂದು ಒಡವೆ ದರೋಡೆ ಮಾಡಿದ್ದಾರೆ ಎನ್ನುವುದು ಪ್ರಾಸಿಕ್ಯೂಷನ್‌ನ ಆರೋಪವಾಗಿತ್ತು. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಸತ್ರ ನ್ಯಾಯಾಲಯವು 2012ರಲ್ಲಿ ಶಿವಪ್ರಸಾದ್ ಅಪರಾಧಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ 2013ರಲ್ಲಿ ಶಿವಪ್ರಸಾದ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್, 2018ರಲ್ಲಿ ಶಿಕ್ಷೆ ರದ್ದುಪಡಿಸಿ, ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು. ವಿಚಾರಣೆ ನಡೆಸಿದ್ದ ಸತ್ರ ನ್ಯಾಯಾಲಯವು ಆರೋಪಿಯನ್ನು ದರೋಡೆ ಪ್ರಕರಣದಿಂದ ಖುಲಾಸೆಗೊಳಿಸಿ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶಿವಪ್ರಸಾದ್ ಮತ್ತೆ ಹೈಕೋರ್ಟ್ ಕದತಟ್ಟಿದ್ದರು. ಈಗ ಆ ಆರೋಪದಿಂದಲೂ ಅವರು ಮುಕ್ತರಾಗಿದ್ದಾರೆ.