ಬೆಂಗಳೂರು: ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಹಾಗೂ ಆತನ ಸ್ನೇಹಿತನ ವಿರುದ್ಧ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆ ವಿರುದ್ಧ ಪ್ರಕರಣ ದಾಖಲಾಗಿದ್ಯಾಕೆ?
ಡ್ರಾಪ್ಗಾಗಿ ಸಂತ್ರಸ್ತೆ ಬೈಕ್ನಲ್ಲಿ ತೆರಳುವ ಮುನ್ನ ಅಂದು ರಾತ್ರಿ (ಆಗಸ್ಟ್.17) ಕೊರಮಂಗಲಕ್ಕೆ ಗೆಳೆಯನ ಜೊತೆ ಬಂದಿದ್ದಳು. ಊಟ ಮುಗಿಸಿಕೊಂಡು ಗೆಳೆಯನ ಜೊತೆ ಕಾರಿನಲ್ಲಿ ತೆರಳುವಾಗ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಳು. ಈ ವೇಳೆ ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಒಂದಲ್ಲಾ ಎರಡಲ್ಲ ಮೂರು ವಾಹನಗಳು ಜಖಂ ಆಗಿವೆ. ಎರಡು ಆಟೋ ಹಾಗೂ ಒಂದು ಬೈಕ್ಗೆ ಡಿಕ್ಕಿ ಹೊಡೆದು ಕಾರನ್ನೂ ನಿಲ್ಲಿಸದೆ ಫೋರಂ ಮಾಲ್ ಕಡೆ ಚಲಾಯಿಸಿಕೊಂಡು ಹೋಗಿದ್ದಾಳೆ. ತಕ್ಷಣವೇ ಜಖಂ ಆಗಿದ್ದ ಎರಡು ಆಟೋಗಳು ಕಾರನ್ನು ಫಾಲೋ ಮಾಡಿ ಪ್ರಶ್ನಿಸಿದ್ದಾರೆ. ಆಗ ಕಾರಿನಿಂದ ಇಳಿದ ಸಂತ್ರಸ್ತೆ ಏಕಾಏಕಿ ಕಾರು ಅಲ್ಲೇ ಬಿಟ್ಟು ತೆರಳಿದ್ದಾಳೆ. ಆಗ ಆಕೆ ಸ್ನೇಹಿತ ಚಾಲಕರ ಜೊತೆ ವಾದ ಮಾಡಿ ಪರಿಸ್ಥಿತಿ ನಿಭಾಯಿಸಿ ಬಳಿಕ ಯುವತಿಗಾಗಿ ಹುಡುಕಾಡಿದ್ದಾನೆ.
ಇನ್ನು ಯುವತಿಯನ್ನು ಹುಡುಕಾಡುವಾಗ ಯುವತಿ ರಸ್ತೆ ಬಳಿ ಹೋಗಿ ಡ್ರಾಪ್ ಕೇಳುತ್ತಿದ್ದದ್ದನ್ನು ನೋಡಿದ ಸ್ನೇಹಿತ ವಿಚಾರಿಸಿದಾಗ, ಯುವತಿ ತಾನು ಮೊಬೈಲ್ ಅನ್ನು ಪಬ್ ನಲ್ಲೇ ಬಿಟ್ಟು ಬಂದಿದ್ದೇನೆ ಎಂದು ತಿಳಿಸಿದ್ದಾಳೆ. ಈ ವೇಳೆ ಇಬ್ಬರೂ ಒಬ್ಬರಿಗೊಬ್ಬರು ತಪ್ಪಿಕೊಂಡು ಸಮಾಧಾನ ಮಾಡಿಕೊಂಡಿದ್ದಾರೆ. ನಂತರ ಅಪರಿಚಿತ ವ್ಯಕ್ತಿಯಿಂದ ಡ್ರಾಪ್ ಕೇಳಿ ಯುವತಿ ಅಲ್ಲಿಂದ ಹೊರಟಿದ್ದಾಳೆ. ಈ ವೇಳೆ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿದೆ. ಸದ್ಯ ಯುವತಿ ಹಾಗೂ ಆಕೆಯ ಸ್ನೇಹಿತನ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಾಗರೂಕತೆ ಮತ್ತು ಅತಿಯಾದ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಚೇತರಿಕೆಗೊಳ್ತಿದ್ದಂತೆಯೆ ಕೇಸ್ ಸಂಬಂಧ ವಿಚಾರಣೆ ನಡೆಸಲಾಗುವುದು.