ಮಹಾರಾಷ್ಟ್ರ: ಮಹಾರಾಷ್ಟ್ರದ ಥಾಣೆಯ ಬದ್ಲಾಪುರ್ ದಲ್ಲಿ ನಾಲ್ಕು ವರ್ಷದ ಪುಟ್ಟ ಹೆಣ್ಣು ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಸಿದ ಕೃತ್ಯದ ವಿರುದ್ಧ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅರು ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನನ್ನು ಬಂಧಿಸಿರುವ ಘಟನೆ ಅಕೋಲಾದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಶಿಕ್ಷಕ (47ವರ್ಷ) ಅಶ್ಲೀಲ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡುತ್ತಿರುವುದಾಗಿ ಕೆಲವು ವಿದ್ಯಾರ್ಥಿನಿಯರು ಆರೋಪಿಸಿರುವ ಪ್ರಕರಣದ ಸಂಬಂಧ ಮಂಗಳವಾರ (ಆ.20) ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕೋಲಾದ ಕಾಝಿಖೇಡ್ ನಲ್ಲಿರುವ ಜಿಲ್ಲಾ ಪರಿಷತ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ಈತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ವಿದ್ಯಾರ್ಥಿನಿಯರು ನೀಡಿರುವ ದೂರಿನ ಆಧಾರದ ಮೇಲೆ ಶಿಕ್ಷಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ವಿದ್ಯಾರ್ಥಿನಿಯರ ಹೇಳಿಕೆಯನ್ನು ಪಡೆದುಕೊಂಡಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಕೋಲಾ ಪೊಲೀಸ್ ವರಿಷ್ಠಾಧಿಕಾರಿ ಬಚ್ಚನ್ ಸಿಂಗ್ ತಿಳಿಸಿದ್ದಾರೆ.