ಮನೆ ರಾಜಕೀಯ ಸರ್ಕಾರಿ ವಿಶ್ವವಿದ್ಯಾಲಯಗಳ ಸಾಧನೆಯ ಬಗ್ಗೆ ಅವಲೋಕನದ ಅಗತ್ಯವಿದೆ:  ಡಾ. ಎಂ.ಸಿ. ಸುಧಾಕರ್

ಸರ್ಕಾರಿ ವಿಶ್ವವಿದ್ಯಾಲಯಗಳ ಸಾಧನೆಯ ಬಗ್ಗೆ ಅವಲೋಕನದ ಅಗತ್ಯವಿದೆ:  ಡಾ. ಎಂ.ಸಿ. ಸುಧಾಕರ್

0

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ನಮ್ಮ ಸರ್ಕಾರಿ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚು ಸಾಧನೆ ಮಾಡಿದ್ದು, ಇದರ ಅವಲೋಕನದ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ, ಎಂ.ಸಿ. ಸುಧಾಕರ್ ತಿಳಿಸಿದರು.

Join Our Whatsapp Group

ಇಂದು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಪ್ರಥಮ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಖಾಸಗಿ ವಿಶ್ವವಿದ್ಯಾಲಯಗಳು ಶೇಕಡ 76ರಷ್ಟು ಸಾಧನೆ ಮಾಡಿದರೆ, ಸರ್ಕಾರಿ ವಿಶ್ವವಿದ್ಯಾಲಯಗಳು ಶೇಕಡ 39ರಷ್ಟು ಸಾಧನೆ ಮಾಡಿವೆ. ಸರ್ಕಾರಿ ವಿಶ್ವವಿದ್ಯಾಲಯಗಳು ಇನ್ನು ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ನೀಡಿದರೆ ಸರ್ವರಿಗೂ ಉತ್ತಮ ವಿದ್ಯಾಭ್ಯಾಸ ದೊರೆಯುತ್ತದೆ. ನಮ್ಮಲ್ಲಿ 150 ವರ್ಷಗಳಿಗೂ ಹಳೆಯದಾದ ವಿಶ್ವವಿದ್ಯಾಲಯಗಳು ಒಳ್ಳೆಯ ಶಿಕ್ಷಣ ನೀಡುತ್ತಿದೆ. ಇಂದಿನ ಬದಲಾದ ಶೈಕ್ಷಣಿಕ ಬೇಡಿಕೆಗಳಿಗೆ ಅನುಗುಣವಾಗಿ ಹೆಚ್ಚು ಜನ ಖಾಸಗಿ  / ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಬದುಕಿನ ಮಹತ್ವದ ಘಟ್ಟ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕೆಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಅನುದಾನ ಆಯೋಗ (ಯು.ಜಿ.ಸಿ)ದ ಅಧ್ಯಕ್ಷರಾದ ಪ್ರೊ ಮಾಮಿದಾಳ ಜಗದೀಶ್ ಕುಮಾರ್ ಅವರು, ಇಂದಿನ ಶಿಕ್ಷಣ ಬರಿ ಅಂಕಗಳಿಸುವುದಷ್ಟೇ ಅಲ್ಲ. ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಜೀವನದಲ್ಲಿ ಅಳವಡಿಸುವುದೇ ಆಗಿದೆ ಎಂದರು.

ನಾವು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಸತ್ಪ್ರಜೆಗಳಾಗಬೇಕು. ಆರೋಗ್ಯಕರ, ಸುಸ್ಥಿರ ಸಮಾಜ ನಿರ್ಮಾಣದ ನಿರ್ಮಾತೃಗಳಾಬೇಕು. ನಾವು ಇಂದು ಪ್ರಾಕೃತಿಕ ವಿಕೋಪಗಳು, ಹವಮಾನ ವೈಪರೀತ್ಯಗಳನ್ನು ಎದರುಸುತ್ತಿದ್ದೇವೆ. ನಮ್ಮಲ್ಲಿರುವ ಸಾಮಥ್ರ್ಯವನ್ನು ಗುರುತಿಸಿಕೊಂಡು ಯಾವ ರಂಗದಲ್ಲಾದರೂ ಸರಿ ಹೆಸರು ಮಾಡಬೇಕು. ಇದರಿಂದ ನಮಗೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ಬರುತ್ತದೆ. ದೇಶದ ನಾಗರೀಕರಾಗಿ ನಾವು ಮಾಡಬೇಕಾದ ಕೆಲಸಗಳು ಮತ್ತು ಹೊರಬೇಕಾದ ಜವಬ್ದಾರಿಗಳು ಬಹಳಷ್ಟಿವೆ ಎಂದರು.

ಘಟಿಕೋತ್ಸವದಲ್ಲಿ ಬಾಹ್ಯಕಾಶ ವಿಜ್ಞಾನಿ ಮತ್ತು ಚಂದ್ರಯಾನದಲ್ಲಿ ಅಪಾರ ಕೊಡುಗೆಗಳನ್ನು ನೀಡಿರುವ ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ್, ಸ್ವಾಮಿ ವಿವೇಕಾನಂದ ಯುತ್ ಮೂಮೆಂಟ್‍ನ ಡಾ. ರಾಮಸ್ವಾಮಿ ಬಾಲಸುಬ್ರಮಣ್ಯಂ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕರಾದ ಡಾ. ಕೆ. ದಿನೇಶ್ ಅವರಿಗೆ ತಮ್ಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ನೃಪತುಂಗ ವಿಶ್ವವಿದ್ಯಾಲಯದ ಒಟ್ಟು 338 ಸ್ನಾತಕೋತ್ತರ ಮತ್ತು 454 ಸ್ನಾತಕ ಪದವಿಧರರಿಗೆ ಈ ಪ್ರಥಮ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಒಟ್ಟು 16 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿರುವ  ಹಾಗೂ ವಿಶ್ವವಿದ್ಯಾಲಯದ ಪ್ರಾಯೋಜಿತ ಸ್ವರ್ಣ ಪದಕಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀನಿವಾಸ ಎಸ್. ಬಳ್ಳಿ, ಕುಲಸಚಿವರುಗಳಾದ ಪ್ರೊ. ಎ.ಸಿ. ಮಂಜುಳ, ಶಿವನಂದ ಬಾ ಕರಾಳೆ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.