ಮನೆ ಕಾನೂನು ಉದ್ಯೋಗಸ್ಥ ಮಹಿಳೆ ವ್ಯಭಿಚಾರಿ ಎಂದು ಊಹಿಸಲಾಗದು: ವಿಚ್ಛೇದನಕ್ಕೆ ತರ್ಕಬದ್ಧ ಪುರಾವೆ ಅಗತ್ಯ ಎಂದ ಪಂಜಾಬ್ ಹೈಕೋರ್ಟ್

ಉದ್ಯೋಗಸ್ಥ ಮಹಿಳೆ ವ್ಯಭಿಚಾರಿ ಎಂದು ಊಹಿಸಲಾಗದು: ವಿಚ್ಛೇದನಕ್ಕೆ ತರ್ಕಬದ್ಧ ಪುರಾವೆ ಅಗತ್ಯ ಎಂದ ಪಂಜಾಬ್ ಹೈಕೋರ್ಟ್

0

ಉದ್ಯೋಗಸ್ಥ ಮಹಿಳೆಯರು ಮನೆಯ ಹೊರಗೆ ವ್ಯಭಿಚಾರ ನಡೆಸುತ್ತಿರಬಹುದು ಎಂಬ ಊಹೆ ಇಡೀ ಮಹಿಳಾ ಸಮುದಾಯದೆಡೆಗಿನ ಭಾವನೆಗೆ ಕಳಂಕ ಹಚ್ಚುತ್ತದೆ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ಹೇಳಿದೆ.

Join Our Whatsapp Group

ಪತ್ನಿ ಕ್ರೌರ್ಯ ಎಸಗಿದ್ದು ವ್ಯಭಿಚಾರ ನಡೆಸಿದ್ದಾಳೆ ಎಂಬ ಆಧಾರದಲ್ಲಿ ವಕೀಲರೊಬ್ಬರು ಪತ್ನಿಗೆ ವಿಚ್ಛೇದನ ನೀಡಲು ಅವಕಾಶ ಕಲ್ಪಿಸಿದ್ದ ಕೌಟುಂಬಿಕ ನ್ಯಾಯಾಲಯವೊಂದರ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸುಧೀರ್‌ ಸಿಂಗ್‌ ಮತ್ತು ಹರ್ಷ್‌ ಬಂಗಾರ್‌ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ತನ್ನ ಪತ್ನಿ ಮತ್ತು ಭ್ರಷ್ಟಾಚಾರದಿಂದಾಗಿ ಕೆಲಸ ತೊರೆದಿದ್ದ ಮಾಜಿ ನ್ಯಾಯಾಂಗ ಅಧಿಕಾರಿಯೊಬ್ಬರ ನಡುವಿನ ಸಂಬಂಧದ ಬಗ್ಗೆ ವಿಚಾರಣಾ ನ್ಯಾಯಾಲಯ ತಪ್ಪು ಊಹೆ ಮಾಡಿದೆ ಎಂದು ಹೈಕೋರ್ಟ್‌ ಹೇಳಿದೆ.

“ಈಗಿನ ಆಧುನಿಕ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದು ಕಚೇರಿಗಳಲ್ಲಿ ಕೆಲಸ ಮಾಡುವುದಲ್ಲದೆ  ವ್ಯಾಪಾರೋದ್ಯಮಗಳಲ್ಲಿ ತೊಡಗಿಕೊಂಡಿದ್ದು ಅನೇಕ ಕಚೇರಿ ಸಂಸ್ಥೆ ಹಾಗೂ ಕಂಪೆನಿಗಳಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಎಂಬ ಅಂಶವನ್ನು ಯಾರೂ ನಿರ್ಲಕ್ಷಿಸಬಾರದು. ಕೆಲಸ ಮತ್ತು ವ್ಯಾಪಾರೋದ್ದೇಶಗಳಿಗಾಗಿ ಮನೆಯಿಂದ ಹೊರಗಿರುವ ಮಹಿಳೆಯರು ತಮ್ಮ ಪುರುಷ ಸಹೋದ್ಯೋಗಿಗಳು ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಪಯಣಿಸುವ ವೇಳೆ ಅವರೊಂದಿಗೆ ಸಲುಗೆ ಬೆಳೆಸಿಕೊಂಡು ಆಪ್ತತೆಯಿಂದ ಇದ್ದು ವ್ಯಭಿಚಾರದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗದು” ಎಂಬುದಾಗಿ ನ್ಯಾಯಾಲಯ ನುಡಿಯಿತು.

ವ್ಯಭಿಚಾರ ನಡೆದಿದೆ ಎನ್ನಲು ಕೇವಲ ಆರೋಪ ಮತ್ತು ನಿರ್ಧಾರ ಸಾಕಾಗದು. ಅದು ಹೆಂಡತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವುದರಿಂದ ಅಂತಹ ಆರೋಪಗಳನ್ನು ಸಾಬೀತುಪಡಿಸಬೇಕು ಮತ್ತು ಆ ಆರೋಪ ಸ್ವಭಾವತಃ ನಿರ್ಣಾಯಕವಾಗಿರಬೇಕು ಎಂದು ಅದು ಹೇಳಿದೆ.

ಪತಿಯ ಆರೋಪಗಳನ್ನು ಅಲ್ಲಗಳೆದಿದ್ದ ಪತ್ನಿ ತನ್ನ ಪತಿಯ ತಾಯಿ ವರದಕ್ಷಿಣೆಗೆ ಅಪೇಕ್ಷಿಸಿದ್ದರು. ತನಗೆ ಕಿರುಕುಳ ಮತ್ತು ದೈಹಿಕ ಹಿಂಸೆ ನೀಡಲಾಗಿದೆ ಎಂದು ವಾದಿಸಿದ್ದರು. ಆದರೆ ವಿಚಾರಣಾ ನ್ಯಾಯಾಲಯ ಪತಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿ ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ರಾಜಿ ಸಂಧಾನಕ್ಕೆ ಮುಂದಾಗುವಂತೆ ಹೈಕೋರ್ಟ್‌ ಈ ಹಿಂದೆ ಸೂಚಿಸಿದ್ದರೂ ದಂಪತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ ಹೈಕೋರ್ಟ್‌ ಅರ್ಹತೆಯ ಮೇಲೆ ಪ್ರಕರಣವನ್ನು ಪರಿಗಣಿಸಿತ್ತು.

ವ್ಯಭಿಚಾರದ ಆರೋಪಗಳನ್ನು ಸಾಬೀತುಪಡಿಸಲು ಪತಿ ವಿಫಲರಾಗಿದೆ ಎಂದು ನ್ಯಾಯಾಲಯ ನುಡಿಯಿತು. ಅಲ್ಲದೆ ಪತ್ನಿ ಅತ್ಯಾಧುನಿಕ ಜೀವನ ನಡೆಸುತ್ತಿದ್ದು ಆಸ್ಟ್ರೇಲಿಯಾದಲ್ಲಿದ್ದಾಗ ಬಾಡಿಗೆ ವಸತಿಗೃಹದಲ್ಲಿ ವ್ಯಕ್ತಿಯೊಂದಿಗೆ ವಾಸಿಸಿದ್ದರು ಎಂದು ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದ ಅಂಶವನ್ನು ಹೈಕೋರ್ಟ್‌ ಬದಿಗೆ ಸರಿಸಿತು. ಪ್ರವಾಹದಿಂದಾಗಿ ಆಸ್ಟ್ರೇಲಿಯಾದಲ್ಲಿ ವಸತಿ ಸೌಕರ್ಯಗಳ ಕೊರತೆ ಇದ್ದುದರಿಂದ ಅವರು ಅನಿವಾರ್ಯ ಕಾರಣಕ್ಕೆ ವಸತಿ ಗೃಹದಲ್ಲಿ ತಂಗುವಂತಾಗಿತ್ತು ಎಂದಿರುವ ನ್ಯಾಯಾಲಯ ಘಟನೆ ನಡೆದಿರುವುದು ಮದುವೆಗೂ ಮುನ್ನ ಎಂದಿದೆ.

ಆದರೂ ಪತ್ನಿ ಕ್ರೌರ್ಯ ಎಸಗಿರುವುದನ್ನು ಒಪ್ಪಿದ ನ್ಯಾಯಾಲಯ ತನ್ನ ಸಂಸಾರ ಉಳಿಸಿಕೊಳ್ಳಲು ಹೀಗೆ ಮಾಡಿದೆ ಎಂಬ ಪತ್ನಿಯ ನಿಲುವನ್ನು ತಿರಸ್ಕರಿಸಿತು.

ಪರಿಣಾಮ ವ್ಯಭಿಚಾರದ ಆಧಾರದ ಮೇಲೆ ವಿಚ್ಛೇದನ ನೀಡಲು ಒಪ್ಪದ ನ್ಯಾಯಾಲಯ ಕ್ರೌರ್ಯದ ಆಧಾರದಲ್ಲಿ ವಿವಾಹವನ್ನು ವಿಸರ್ಜಿಸುವ ತೀರ್ಪುನ್ನು ಎತ್ತಿಹಿಡಿದು ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.