ಮನೆ ದೇವಸ್ಥಾನ ಸಹ್ಯಾದ್ರಿ ಶ್ರೀನಿ

ಸಹ್ಯಾದ್ರಿ ಶ್ರೀನಿ

0

    ಮೋಕ್ಷ ಪಡೆಯಲು ಪೌರಾಣಿಕವಾಗಿ ಪ್ರಸಿದ್ಧ ಪಡೆದ ಭಾರತ ದೇಶದ ಪವಿತ್ರ ಸ್ಥಳಗಳಲ್ಲಿ ಗಂಗಾ ತಟದಲ್ಲಿರುವ, ವಿಘ್ನೇಶ್ವರ,ವಿಶ್ವನಾಥ,ಭದ್ರೆಯ ತಟದಲ್ಲಿ ಅನ್ನಪೂರ್ಣ, ಹೀಗೆ ಉಳಿದಂತೆ ಸರ್ಮಂಗಳ, ಬಿಂದು ಮಾಧವ ಕಾಲಭೈರವ ದೇವಾಲಯಗಳನ್ನೊಳಗೊಂಡಿರುವ, ವ್ಯಾಸ, ಮಣಿಕರ್ಣಿಕಾ, ಹನುಮಂತ, ಹರಿಶ್ಚಂದ್ರ ಮೊದಲಾದ ಘಟ್ಟಗಳಿರುವ  ಕಾಶಿ ಕ್ಷೇತ್ರಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಈ ಕ್ಷೇತ್ರದಲ್ಲಿ ಮುಕ್ತಿ ಪಡೆಯಬೇಕೆಂಬ ನಂಬಿಕೆಯೂ ಜನಜನಿತ.ಹಾಗಾಗಿ ಇದನ್ನು ಅವಿಮುಕ್ತ ಕ್ಷೇತ್ರವೆಂದೂ ಕರೆಯುವುದಿದೆ ಹುಟ್ಟಿದ ಮೇಲೆ ಕಾಶಿ,ಗಯಾ, ಪ್ರಯಾಗ ಮೊದಲಾದ ಕ್ಷೇತ್ರಗಳ ದರ್ಶನ ಪ್ರತಿಯೊಬ್ಬ ಹಿಂದುವೂ ಮಾಡಬೇಕೆಂಬುದು ನಾವು ರೂಪಿಸಿಕೊಂಡಿರುವ ಅಲಿಖಿತ ನಿಯಮ. ಆ ಕ್ಷೇತ್ರಗಳ ದರ್ಶನ ಪ್ರತಿಯೊಬ್ಬರಲ್ಲಿಯೂ ದಿವ್ಯ ಅನುಭವವನ್ನು ನೀಡುತ್ತದೆ. ಕಾಶಿ ಪ್ರವಾಸದ ನಂತರ ಅಲ್ಲಿಂದ ಗಂಗೆ,ಅನ್ನಪೂರ್ಣ ದೇವಿಯ ವಿಗ್ರಹ, ಕಾಶಿದಾರ ತೆಗೆದುಕೊಂಡು ಬಂದು ಊರಿನಲ್ಲಿ ಕಾಶಿ ಸಮಾರಾಧನೆ ಆಯೋಜಿಸಿ ಅಲ್ಲಿ ಕಾಶಿಯಿಂದ ತಂದ ವಸ್ತುಗಳಿಗೆ ಪೂಜಿಸಿ,ದಾನಾದಿಗಳನ್ನು ಕೊಡುವುದರ ಮೂಲಕ ಮೋಕ್ಷಕ್ಕೆ ದಾರಿ ಮಾಡಿಕೊಳ್ಳಬೇಕೆಂಬುದು  ಅಲಿಖಿತ ನಿಯಮ.ಮರಾಠರಾಣಿ ಅಹಲ್ಯಬಾಯಿ ಹೋಳ್ಕರ್ ಕಾಶಿಯಲ್ಲಿ ವಿಶ್ವನಾಥ ದೇವಾಲಯ ನಿರ್ಮಿಸಿದಳೆಂದು ಇತಿಹಾಸ ಹೇಳುತ್ತದೆ.ಈ ದೇವಾಲಯದ ಗೋಪುರಕ್ಕೆ ರಾಜ ರಣಜಿತ್ ಸಿಂಗ್ ಬಂಗಾರದ ತಗಡನ್ನು ಹೊಡೆಸಿದ ಕುರಿತು ದಾಖಲೆಗಳು ಹೇಳುತ್ತವೆ. ಕಾಶಿಯ ಮೂಲ ಹೆಸರು ವಾರಣಾಸಿ.ಬ್ರಿಟಿಷರಲ್ಲಿ ಬಾಯಲ್ಲಿ ಬನಾರಸ್ ಎಂದು ಕರೆಯಲ್ಪಟ್ಟಿತ್ತು.ಈ ಸ್ಥಳ ದೇವತೆಗಳಿಗೆ ಬಹು ಪ್ರಿಯವಾದ ಸ್ಥಳವಾಗಿತ್ತಂತೆ, ಆ ಕಾರಣ ಈ ಊರನ್ನು ಆನಂದ ಕಾನನ ಎಂದೂ ಕರೆಯುವುದಿದೆ. ಉಪನಿಷತ್ತು. ಬ್ರಾಹ್ಮಣಗಳಲ್ಲಿ ಬೌದ್ಧ ಗ್ರಂಥಗಳಲ್ಲಿ ಕಾಶಿಗೆ ಪವಿತ್ರ ಸ್ಥಾನವನ್ನು ಕಲ್ಪಿಸಿಕೊಡಲಾಗಿದೆ.

Join Our Whatsapp Group

    ಕಾಶಿಯವರಿಗೆ ಹೋಗಿ ಕ್ಷೇತ್ರ ದರ್ಶನ ಮಾಡುವುದರ ಜೊತೆಗೆ ಪಿತೃಕಾರ್ಯಗಳನ್ನು ನಡೆಸಲು ಅಸಾಧ್ಯ ಎನ್ನುವವರಿಗೆ ದೇಶದಾದ್ಯಂತ ಪವಿತ್ರ ನದಿಗಳ ತಟದಲ್ಲಿ ಕಾಶಿ ಕ್ಷೇತ್ರವನ್ನು ದರ್ಶಿಸಿದಾಗ ಸಿಗುವ ಫಲವನ್ನು ಪಡೆಯಲು ಸಾಧ್ಯವಾಗುವಂತಹ ಹಲವು ಸ್ಥಳಗಳಿವೆ. ಅಂತಹ ಹಲವು ಕ್ಷೇತ್ರಗಳು ಕರ್ನಾಟಕದಲ್ಲಿಯೂ ಇವೆ.ಅವುಗಳಲ್ಲಿ ಮುಖ್ಯವಾಗಿ ಕಾವೇರಿ ತೀರದ ಶ್ರೀರಂಗಪಟ್ಟಣ, ವರದಾ, ತೀರದ ವರದಾಮೂಲ ಭದ್ರಾ ತೀರದ ಹೊರನಾಡು, ತುಂಗಭದ್ರಾ, ಸಂಗಮ ತೀರ ಕೂಡ್ಲಿ ಹರಿಹರ ಕ್ಷೇತ್ರ, ಹೀಗೆ ಹಲವು ಕ್ಷೇತ್ರಗಳು ಕಾಶಿ ಕ್ಷೇತ್ರದಂತೆಯೇ ಪ್ರಸಿದ್ಧವಾಗಿವೆ ಈ ಸ್ಥಳಗಳಲ್ಲಿಯೂ ಶ್ರದ್ಧಾ ಭಕ್ತಿಯಿಂದ ಪಿತೃ ಕಾರ್ಯಧಿಗಳು ನಡೆಸಿದರೆ ಕಾಶಿಯಲ್ಲಿ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಜನಜನಿತವಾಗಿದೆ.

     ಕರ್ನಾಟಕದಲ್ಲಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಕಳಸ ಮತ್ತು ಹೊರನಾಡು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಇದು ಭದ್ರ ನದಿಯ ಬಲ ದಂಡೆಯಲ್ಲಿದೆ. ಸುತ್ತಲೂ ಪಶ್ಚಿಮ ಘಟ್ಟದಿಂದ ಆವರಿಸಿರುವ ಈ ಪ್ರದೇಶ ಅಧ್ಯಾತ್ಮಿಕವಾಗಿಯೂ ಗಮನ ಸೆಳೆಯುವ ಸ್ಥಳವಾಗಿದೆ.ಶೃತಬಿಂದು ಮಹಾರಾಜನು ಪಾಪ ಪರಿಹಾರರ್ಥವಾಗಿ ಈ ಪ್ರದೇಶದಲ್ಲಿ 5 ಸ್ಥಾನಗಟ್ಟಗಳನ್ನು ನಿರ್ಮಿಸಿದ್ದನಂತೆ. ಅದರಲ್ಲಿ ಗಿರಿ ಪ್ರದೇಶದಲ್ಲಿ ಹುಟ್ಟಿದ ‘ಅಂಬಾತೀರ್ಥ ’ಎಂಬ ಸ್ಥಾನ ಘಟ್ಟದಲ್ಲಿ ‘ಮಾಧವ ಬಂಡೆ’ ಎಂಬ ಚಚ್ಚೌಕವಿದ್ದು ಇದರಲ್ಲಿ ‘ಮಧ್ವೇನ ಏಕ ಹಸ್ತೇನ ಭೀಮ ಅನೀಯಾ ಸ್ಥಾಪಿತ ಶಿಲಾ’ಎಂಬ ಶಾಸನ ಕಂಡುಬರುತ್ತದೆ.ಇಲ್ಲಿರುವ ಗಣೇಶ ವಿಗ್ರಹ ಮತ್ತು ಕ್ಷೇತ್ರಪಾಲ,ದ್ವಾರಪಾಲಕರ ಶಿಲ್ಪಗಳು ಗಮನ ಸೆಳೆಯುವಂತಿದ್ದು ದ್ವಾರಪಾಲಕರ ಕೈಯಲ್ಲಿ ಗುಲಗಂಜಿ ಕೊಡಲಾಗಿದೆ.ಇದು ಈ ಕ್ಷೇತ್ರ ದಕ್ಷಿಣದ ಕಾಶಿಗಿಂತಲೂ ಒಂದು ಗುಲಗುಂಜಿಯಷ್ಟು ತೂಕ ಹೆಚ್ಚಿನದಾಗಿದೆ ಎಂಬ ಅಭಿಪ್ರಾಯವನ್ನು ಸೂಚಿಸುವುದಾಗಿ ಐತಿಹ್ಯವೂಂದು ಹೇಳುತ್ತದೆ.