ಮನೆ ರಾಜ್ಯ ನಮ್ಮ ದೇಶ ಗುರು ಪರಂಪರೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ನಮ್ಮ ದೇಶ ಗುರು ಪರಂಪರೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

0

ಮೈಸೂರು: ನಮ್ಮ ದೇಶ ಗುರು ಪರಂಪರೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಇದರ ಸ್ಮರಣಾರ್ಥವಾಗಿ ಇಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮೈಸೂರು ವಿಶ್ವವಿದ್ಯಾನಿಲಯದವರಾದ ರಾಧಾಕೃಷ್ಣನ್ ಅವರು ಮೈಸೂರಿನೊಂದಿಗೆ ಅವಿನಾಭಾವ ಸಂಬoಧವನ್ನು ಹೊಂದಿದ್ದರು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.

Join Our Whatsapp Group

ಇಂದು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಮೈಸೂರು ಇವರ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ “ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ”ದಲ್ಲಿ ಮಾತನಾಡಿದ ಅವರು, ರಾಧಾಕೃಷ್ಣನ್ ಅವರು ಒಬ್ಬ ಮಹಾನ್ ಶಿಕ್ಷಕ ಎಂಬುದಕ್ಕೆ ಅವರು ದೆಹಲಿಗೆ ತೆರಳುವ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಅವರನ್ನು ಬೀಳ್ಕೊಟ್ಟ ಪರಿಯೇ ಉದಾಹರಣೆಯಾಗಿದೆ ಎಂದರು.

ನಮ್ಮ ದೇಶದ ಸಂಸ್ಕೃತಿಯಲ್ಲಿ ತಾಯಿಯೇ ಮೊದಲ ಗುರು ಎಂಬ ಪ್ರತೀತಿಯಿದೆ. ಇದಕ್ಕೆ ಮಾದರಿಯಾಗಿ ಸಾವಿತ್ರಿ ಬಾಫುಲೆ ಅವರು ದೇಶದಲ್ಲಿ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ಅರಿವು ಮೂಡಿಸಿ ಅಕ್ಷರದ ಜ್ಞಾನ ದೀವಿಗೆ ಹೊತ್ತಿಸಿದರು ಎಂದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ಮನುಷ್ಯನ ಜೀವನದಲ್ಲಿ ಗುರುವಿಲ್ಲದಿದ್ದರೆ ಅದು ಶೂನ್ಯದ ಬದುಕಾಗುತ್ತದೆ. ಗುರು ಎಂಬ ಶಕ್ತಿಯು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿಯೂ ಆತನನ್ನು ಬಲಿಷ್ಠ ವ್ಯಕ್ತಿಯನ್ನಾಗಿ ಮಾಡುವಲ್ಲಿ ಹಾಗೂ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಅಗಾಧವಾದ ಪಾತ್ರವಹಿಸಿರುತ್ತದೆ ಎಂದು ಹೇಳಿದರು.

ಮೈಸೂರು ನಗರದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಶಿಕ್ಷಕರು ಗ್ರಾಮೀಣ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವಂತಹ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ, ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗದoತೆ ನೋಡಿಕೊಳ್ಳಬೇಕು ಇದರಿಂದ ದೇಶ ಪ್ರಗತಿಯತ್ತ ಸಾಗಲು ಸಹಕಾರಿಯಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿನ ಶಾಲಾ-ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಲಭಿಸಲು ಉತ್ತಮ ಶಿಕ್ಷಣ ಹಾಗೂ ಶಿಕ್ಷಕರೆ ಕಾರಣ ಎಂದು ಹೇಳಿದರು. ಇದೇ ರೀತಿಯಾಗಿ ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ತಲುಪುವಂತೆ ಮಾಡುವಲ್ಲಿ ಶ್ರಮಿಸಬೇಕು ಎಂದರು.

ವಿಧಾನ ಪರಿಷತ್‌ನ ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್ ಅವರು ಮಾತನಾಡಿ, ಸ್ವಾತಂತ್ರ್ಯ  ಭಾರತದ ಮೊದಲ ಉಪ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ ಕೀರ್ತಿ ಒಬ್ಬ ಶಿಕ್ಷಕನಿಗೆ ಸಲ್ಲುತ್ತದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯನ್ನು ನಿರ್ಲಕ್ಷಿಸಿದರೆ ದೇಶದ ಅಭಿವೃದ್ಧಿ ಅಸಾಧ್ಯ. ಪ್ರತಿಯೊಬ್ಬ ಮನುಷ್ಯನಿಗೂ ಅಕ್ಷರ ಮತ್ತು ಆರೋಗ್ಯ ಬಹಳ ಮುಖ್ಯ ಎಂದರು.

ವಿಧಾನ ಪರಿಷತ್‌ನ ಶಾಸಕರಾದ ಸಿ.ಎನ್.ಮಂಜೇಗೌಡ ಅವರು ಮಾತನಾಡಿ, ಗಾಂಧೀಜಿ, ನೆಹರುರಂತಹ ದೇಶದ ಮಹಾನ್ ವ್ಯಕ್ತಿಗಳ ಹಿಂದೆ ಇದ್ದಂತಹ ಪ್ರತಿಯೊಬ್ಬ ಗುರುವಿನ ಪಾತ್ರ ಮಹತ್ವವಾದದ್ದು, ಅಂತಹ ಮಹಾನ್ ವ್ಯಕ್ತಿಗಳು ಇಂದಿನ ಪೀಳಿಗೆಗೆ ಗುರುಗಳಿದ್ದಂತೆ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಇಂದಿನ ಮಕ್ಕಳಿಗೆ ಸಮಯದ ಮಹತ್ವ ತಿಳಿದಿರುವುದಿಲ್ಲ ಹಾಗಾಗಿ ಶಿಕ್ಷಕರು ಮೊದಲು ಅವರಿಗೆ ಸಮಯ ಪರಿಪಾಲನೆಯ ಬಗ್ಗೆ ತಿಳಿಸಿಕೊಡುವುದರ ಮೂಲಕ ಉತ್ತಮ ಶಿಕ್ಷಣ ನೀಡುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ನ ಸದಸ್ಯರಾದ ಕೆ.ವಿವೇಕಾನಂದ ಅವರು ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಪ್ರಮಾಣಿಕ ಆದರ್ಶ ಶಿಕ್ಷಕರಾಗಿದ್ದರು. ಅವರ ನಡೆ-ನುಡಿ, ಸ್ವಭಾವ, ವಿಚಾರ ಲಹರಿಗಳು ವಿದ್ಯಾರ್ಥಿಗಳಿಗೆ ಪ್ರಿಯವಾಗಿದ್ದವು. ಹಿರಿಯರು ಹೇಳಿರುವಂತೆ ಗುರುವಿನ ಗುಲಾಮನಾಗುವ ತನಕ ಮುಕುತಿ ದೊರೆಯುವುದಿಲ್ಲ ಹಾಗೂ ನಾವು ನಮ್ಮ ಗುರಿಯನ್ನು ತಲುಪಬೇಕಾದರೆ ಹಿಂದೆ ಗುರು ಎಂಬ ಶಕ್ತಿ ಇರಬೇಕು ಎಂದರು.

ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಜೆ.ಎಸ್.ಎಸ್ ಕಾಲೇಜು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಭೀಮರಾಜು ಈರೇಗೌಡ ಅವರು ಮಾತನಾಡಿ, ಈ ನಾಡಿನಲ್ಲಿ ಕೋಟ್ಯಾಂತರ ಶಿಕ್ಷಕರಿದ್ದರೂ, ಮಕ್ಕಳಿಗೆ, ಮನೆಯವರಿಗೆ, ಬಂಧು-ಬಳಗಕ್ಕೋಸ್ಕರ ಬದುಕದೆ ದೇಶಕ್ಕಾಗಿ, ನಾಡಿಗಾಗಿ, ಮಣ್ಣಿಗಾಗಿ ಬದುಕಿದ ಮಹಾನ್ ಶಿಕ್ಷಕರಿಗಾಗಿ ಇಂತಹ ದಿನಾಚರಣೆಯನ್ನು ಬಹಳ ಮಹತ್ವದಿಂದ ಆಚರಿಸಲಾಗುತ್ತದೆ ಎಂದರು.

 ಶಿಕ್ಷಣಕ್ಕೆ ಇಡೀ ಭ್ರಹ್ಮಾಂಡದಲ್ಲಿ ಅದ್ಭುತವಾದ ಚೈತನ್ಯವಿದೆ. ಸಾವಿರ ವರ್ಷಗಳು ನಮ್ಮಲ್ಲಿ ಅರಿವಿಲ್ಲದಂತೆ ಕಳೆದು ಹೋಗಿದ್ದರೂ ಶಿಕ್ಷಣ ಎಂಬುದು ಸಾವಿಲ್ಲದಂತೆ ನಿಂತಿದೆ. ಒಂದು ದೇಶ ಅರ್ಥಿಕವಾಗಿ, ಭೌತಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ  ಹೊಂದಬೇಕಾದರೆ ಶಿಕ್ಷಣ ಬಹಳ ಮುಖ್ಯವಾದ ಅಂಶವಾಗುತ್ತದೆ. ನಾವು ಶಿಕ್ಷಣದ ವ್ಯವಸ್ಥೆಯನ್ನು ತಳಮಟ್ಟದಲ್ಲಿ ನಾಶ ಮಾಡಿದರೆ. ದೇಶವನ್ನು ಕಟ್ಟಲು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುವುದಿಲ್ಲ ಎಂದರು.

 ಶಿಕ್ಷಣವು ಒಂದು ದೇಶದ ಭದ್ರ ಬುನಾದಿ ಇದ್ದಂತೆ, ಯಾವುದೇ ದೇಶದಲ್ಲಿ ಶಿಕ್ಷಣವನ್ನು ನಾಶ ಮಾಡಿದರೆ ಆ ದೇಶ ನಾಶವಾದಂತೆ. ದೇಶದ ಭದ್ರತೆ, ಸಾಹಿತ್ಯ, ಕಲೆ ಶಿಕ್ಷಣದ ಮೇಲೆ ನಿಂತಿದೆ. ಇಂದು ನಮ್ಮ ಸಂಸ್ಕೃತಿಯು ಅಧೋಗತಿಯತ್ತ ಸಾಗುತ್ತಿದೆ. ಹಾಗಾಗಿ ಶಿಕ್ಷಕರು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ, ನಮ್ಮ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ್  ರೆಡ್ಡಿ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ.ಗಾಯಿತ್ರಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರಾದ ಡಾ.ಪಾಂಡುರoಗ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಸ್.ಟಿ.ಜವರೇಗೌಡ ಅವರು ಸೇರಿದಂತೆ ಮುಖ್ಯೋಪಾಧ್ಯಾಯರುಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.