ಮನೆ ಅಪರಾಧ ಕುಂದಾಪುರ: ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ತೈಲ ಸೋರಿಕೆ: ಸರಣಿ ಅಪಘಾತ

ಕುಂದಾಪುರ: ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ತೈಲ ಸೋರಿಕೆ: ಸರಣಿ ಅಪಘಾತ

0

ಕುಂದಾಪುರ: ಮಂಗಳೂರಿನಿಂದ ಉತ್ತರಪ್ರದೇಶದತ್ತ ಸೋಪ್‌ ಆಯಿಲ್‌ (ಸೋಪ್‌ ತಯಾರಿಕೆಯ ದ್ರವಾಂಶ) ತುಂಬಿದ್ದ ಬೃಹತ್‌ ಟ್ಯಾಂಕರ್‌ ಅಡಿಭಾಗದಲ್ಲಿ ಉಂಟಾದ ರಂಧ್ರದಿಂದ ಹೊರಚೆಲ್ಲಿದ ಸೋಪ್‌ ಆಯಿಲ್‌ ರಸ್ತೆಯಲ್ಲಿ ಮಳೆ ನೀರಿನೊಂದಿಗೆ ಬೆರೆತು ತೆಕ್ಕಟ್ಟೆಯಿಂದ ಹೆಮ್ಮಾಡಿಯವರೆಗೂ ಹಲವು ದ್ವಿಚಕ್ರ ವಾಹನದವರು ಬಿದ್ದು ಗಾಯಗೊಂಡ ಘಟನೆ ಶನಿವಾರ ನಡೆದಿದೆ.

Join Our Whatsapp Group

ಮರವಂತೆ ಬಳಿ ಟ್ಯಾಂಕರ್‌ ಹಾಗೂ ಚಾಲಕ ಧ್ಯಾನಚಂದ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನಿಂದ ಯುಪಿಗೆ ಬೆಳಗ್ಗೆ 32 ಟನ್‌ ಸೋಪ್‌ ಆಯಿಲ್‌ (ಪಾಮ್‌ ಪ್ಯಾಟಿ ಆಸಿಡ್‌ ಡಿಸ್ಟಿಲೇಟ್‌) ತುಂಬಿದ್ದ 16 ಚಕ್ರಗಳ ಬೃಹತ್‌ ಗಾತ್ರದ ಟ್ಯಾಂಕರ್‌ ಹೋಗುತ್ತಿದ್ದ ವೇಳೆ ಅಡಿಭಾಗದಲ್ಲಿ ಆಯಿಲ್‌ ಸೋರಿಕೆಯಾಗುತ್ತಿತ್ತು. ಹೀಗಾಗಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ ಟ್ಯಾಂಕರ್‌ ಸಾಗಿದ ದಾರಿಯಲ್ಲಿ ಸಾಗಿದ್ದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುವಂತಾಗಿತ್ತು. ಲಘು ವಾಹನಗಳು ಬ್ರೇಕ್‌ ತಗುಲದೆ ಸಣ್ಣಪುಟ್ಟ ಅವಘಡ ಸಂಭವಿಸಿತ್ತು.

25-30ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಬಿದ್ದಿದ್ದು, 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿ ಸಮೀಪ ಚಾಲಕನಿಗೆ ಆಯಿಲ್‌ ಸೋರಿಕೆ ಗೊತ್ತಾಗಿತ್ತು.

ಮರವಂತೆ ಬಳಿ ಟ್ಯಾಂಕರ್‌ ಬದಿಗಿಟ್ಟು ಸಂಬಂಧ‌ಪಟ್ಟವರಿಗೆ ಚಾಲಕನೇ ಮಾಹಿತಿ ನೀಡಿದ್ದ. ಘಟನೆಯ ಕುರಿತು ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಬರೆದು ಎಚ್ಚರಿಸಿದ್ದರು. ರಸ್ತೆ ಬದಿ ನಿಂತು ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೂ ಎಚ್ಚರಿಕೆ ನೀಡಿದರು. ಎಚ್ಚರಿಕೆ ನಡುವೆಯೂ ಅಪಘಾತಗಳು ಸಂಭವಿಸಿತ್ತು. ಸಂಚಾರ ಠಾಣೆ ಪಿಎಸ್‌ಐ ಪ್ರಸಾದ್‌ ಕುಮಾರ್‌ ಕೆ., ಸುದರ್ಶನ್‌ ಹಾಗೂ ಸಿಬಂದಿ ಸ್ಥಳದಲ್ಲಿದ್ದರು.

ಪೊಲೀಸರಿಂದ ಏಕಮುಖ ಸಂಚಾರ ವ್ಯವಸ್ಥೆ

ಚೌತಿಯ ದಿನವಾದ ಕಾರಣ ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಇತ್ತು. ಅಂದಾಜು 8.30ರ ಬಳಿಕ ಟ್ಯಾಂಕರ್‌ ಸಾಗಿದ ಹೆದ್ದಾರಿಯಲ್ಲಿ ಬೈಕ್‌ ಸವಾರರು ಬೀಳುತ್ತಿರುವುದು ತೈಲದಂತಹ ವಸ್ತು ಸೋರಿಕೆಯಾಗಿರುವುದು ಗಮನಕ್ಕೆ ಬರುತ್ತಲೆ ಎಚ್ಚೆತ್ತುಕೊಂಡ ಕೋಟ, ಕುಂದಾಪುರ ಹಾಗೂ ಗಂಗೊಳ್ಳಿ ಪೊಲೀಸರು ಪ್ರಕರಣ ವರದಿಯಾದ ತೆಕ್ಕಟ್ಟೆಯಿಂದ ಮೊದಲ್ಗೊಂಡು ಹೆಮ್ಮಾಡಿಯವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದರು.

ಪೊಲೀಸರಿಗೆ ಹಲವೆಡೆ ಸಾರ್ವಜನಿಕರು ಸಹಕಾರ ನೀಡಿದರು. ಶನಿವಾರ ಮಧ್ಯಾಹ್ನದವರೆಗೆ 15 ಕಿ.ಮೀ. ವ್ಯಾಪ್ತಿಯಲ್ಲಿ ಒನ್‌ ವೇ ಮಾಡಲಾಗಿದ್ದು, ಸಂಭಾವ್ಯ ಅಪಘಾತ ತಪ್ಪಿಸಲು ಮುಂಜಾಗ್ರತ ಕ್ರಮ ವಹಿಸಲಾಗಿತ್ತು.

ದ್ವಿಚಕ್ರ ವಾಹನ ಸವಾರರು ಹಾಗೂ ಲಘು ವಾಹನಕ್ಕೆ ಸಮಸ್ಯೆಯಾಗುತ್ತಿದ್ದಂತೆ ಅಗ್ನಿಶಾಮಕ ದಳದವರು, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪೆನಿಗಳು ರಸ್ತೆಗೆ ನೀರು ಹಾಕಿ ಸೋರಿಕೆಯಾದ ಸೋಪ್‌ ಆಯಿಲ್‌ನಿಂದ ವಾಹನ ಸಂಚಾರಕ್ಕೆ ಹೆಚ್ಚಿನ ಸಮಸ್ಯೆಯಾಗದಂತೆ ಕ್ರಮ ವಹಿಸಿದರು.