ಮನೆ ಕಾನೂನು ಬಿಎನ್ಎಸ್ಎಸ್ ಅಡಿ ಲಭ್ಯ ಇರುವ ರಕ್ಷಣೆಗೆ ಬೌದ್ಧಿಕ ಅಸಾಮರ್ಥ್ಯವುಳ್ಳ ಆರೋಪಿ ಅರ್ಹ: ಕೇರಳ ಹೈಕೋರ್ಟ್

ಬಿಎನ್ಎಸ್ಎಸ್ ಅಡಿ ಲಭ್ಯ ಇರುವ ರಕ್ಷಣೆಗೆ ಬೌದ್ಧಿಕ ಅಸಾಮರ್ಥ್ಯವುಳ್ಳ ಆರೋಪಿ ಅರ್ಹ: ಕೇರಳ ಹೈಕೋರ್ಟ್

0

ವಿಚಾರಣೆಯಲ್ಲಿ ಪ್ರತಿವಾದ ಮಂಡಿಸಲು ಅಸಮರ್ಥನಾದ ಅಲ್ಜೆಮೈರ್‌ ಕಾಯಿಲೆಯಿಂದ ಬಳಲುತ್ತಿರುವ ಆರೋಪಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಅಡಿಯಲ್ಲಿ ಲಭ್ಯವಿರುವ ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ  [VI ತಂಕಪ್ಪನ್ ಮತ್ತು ಕೇರಳ ಹೈಕೋರ್ಟ್‌ ನಡುವಣ ಪ್ರಕರಣ ].

Join Our Whatsapp Group

ಕಾನೂನಿನ ಪ್ರಕಾರ, ಒಬ್ಬ ಆರೋಪಿ ಅಸ್ವಸ್ಥ ಮನಸ್ಸಿನವರಾಗಿದ್ದರೆ ಮತ್ತು ಆ ಕಾರಣಕ್ಕೆ ಪ್ರತಿವಾದ ಮಂಡಿಸಲು ಅಸಮರ್ಥನೆಂದು ಕಂಡುಬಂದರೆ, ಆಗ ನ್ಯಾಯಾಲಯ ಅಂತಹವರ ವಿರುದ್ಧದ ವಿಚಾರಣೆ ಮುಂದೂಡಬೇಕಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಶ್ನೆಯೊಂದಿಗೆ ವ್ಯವಹರಿಸುವಾಗ, ನ್ಯಾಯಮೂರ್ತಿ ಕೆ ಬಾಬು ಅವರು ಜುಲೈ 1ಕ್ಕೂ ಮುನ್ನ ಹೂಡಲಾದ ಯಾವುದೇ ಮೊಕದ್ದಮೆಗಳಿಗೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ಗಳನ್ನು ಪೂರ್ವಾನ್ವಯವಾಗುವಂತೆ ವಿಸ್ತರಿಸಬೇಕು ಎಂದು ಹೇಳಿದರು.

ಸಿಆರ್‌ಪಿಸಿ ಸೆಕ್ಷನ್‌ಗಳಿಗೆ ಹೋಲಿಸಿದರೆ ಬಿಎನ್‌ಎಸ್‌ಎಸ್‌ ಕೇವಲ ಅಸ್ವಸ್ಥ ಮನಸ್ಸಿನ ವ್ಯಕ್ತಿಗಳಿಗೆ ಮಾತ್ರವಲ್ಲದೆ ಬೌದ್ಧಿಕ ಅಸಾಮಾರ್ಥ್ಯದಿಂದ ಬಳಲುತ್ತಿರುವವರಿಗೂ ರಕ್ಷಣೆ ಒದಗಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹಾಗೆ ಸೆಕ್ಷನ್‌ಗಳನ್ನು ಪೂರ್ವಾನ್ವಯವಾಗುವಂತೆ ವಿಸ್ತರಿಸದೆ ಹೋದರೆ ಬೌದ್ಧಿಕ ಅಸಮಾರ್ಥ್ಯ ಇರುವ ಆರೋಪಿ ತನ್ನನ್ನು ನ್ಯಾಯಾಲಯದಲ್ಲಿ ಪ್ರತಿಪಾದಿಸಲು ಅಸಮರ್ಥನಾಗಲಿದ್ದು ಅದರಿಂದ ನ್ಯಾಯಯುತ ವಿಚಾರಣೆ ವಿಫಲವಾಗುತ್ತದೆ ಎಂದು ಅದು  ವಿವರಿಸಿದೆ.

ಭ್ರಷ್ಟಾಚಾರ ತಡೆ ಕಾಯಿದೆ ಅಡಿಯ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ 74 ವರ್ಷದ ಅಲ್ಜೆಮೈರ್ ಕಾಯಿಲೆಯಿಂದ ಬಳಲುತ್ತಿರುವ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.

ಅರ್ಜಿದಾರ ಬೌದ್ಧಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದಾರೆ ಎಂಬ ವಾದವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಅವರು ಮಾನಸಿಕ ದೌರ್ಬಲ್ಯ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಆದರೂ ವೈದ್ಯಕೀಯ ತಪಾಸಣೆಗೆ ನಿರ್ದೇಶಿಸಿತ್ತು.

ತೀವ್ರ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರೂ ಮನೋವೈದ್ಯರಿಂದ ವಿವರವಾದ ತಪಾಸಣೆಗೆ ವಿಶೇಷ ನ್ಯಾಯಾಲಯ ಶಿಫಾರಸು ಮಾಡಿತ್ತು. ಈ ಆದೇಶವನ್ನು ಆರೋಪಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮಾನಸಿಕ ಅಥವಾ ಬೌದ್ಧಿಕ ಅಸಾಮರ್ಥ್ಯ ಎಂಬುದು ಆರೋಪಿ  ನ್ಯಾಯಯುತ ವಿಚಾರಣೆಯ ಹಕ್ಕನ್ನು ಮತ್ತು ತನ್ನ ರಕ್ಷಣೆಗೆ ಆದ್ಯತೆ ನೀಡುವ ಅವಕಾಶ ಪಡೆಯುವುದನ್ನು ತಡೆಯುತ್ತದೆ ಎಂದು ನ್ಯಾಯಮೂರ್ತಿ ಬಾಬು ತಿಳಿಸಿದರು.

ಅಸ್ವಸ್ಥ ಮನಸ್ಸಿನ ವ್ಯಕ್ತಿಯ ವಿರುದ್ಧ ತನಿಖೆ ಇಲ್ಲವೇ ವಿಚಾರಣೆ ನಡೆಸುವಾಗ ನ್ಯಾಯಾಲಯವ ಅನುಸರಿಸಬೇಕಾದ ವಿವಿಧ ಕಾರ್ಯವಿಧಾನಗಳ ಕುರಿತು ಸಿಆರ್‌ಪಿಸಿಯಲ್ಲಿ ಸೆಕ್ಷನ್‌ಗಳಿವೆ. ಅಂತೆಯೇ ಬಿಎನ್‌ಎಸ್‌ನಲ್ಲಿಯೂ ಅಸ್ವಸ್ಥ ಮನಸ್ಸಿನ ಆರೋಪಿಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳಿವೆ ಎಂದು ನ್ಯಾಯಾಲಯ ಹೇಳಿತು.

ಆದ್ದರಿಂದ, ಬಿಎನ್‌ಎಸ್‌ಎಸ್‌ ಸೆಕ್ಷನ್‌ಗಳಡಿ ಆರೋಪಿಯ ವಾದ ಮರುಪರಿಶೀಲಿಸುವಂತೆ ವಿಶೇಷ ನ್ಯಾಯಾಧೀಶರಿಗೆ ಅದು ಸೂಚಿಸಿತು.