ನವದೆಹಲಿ: ಶಾಲಾ ಉದ್ಯೋಗ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಪತ್ನಿ ರುಚಿರಾ ಬ್ಯಾನರ್ಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ (ಸೆ.09) ವಜಾಗೊಳಿಸಿದೆ.
ವಿಚಾರಣೆಗಾಗಿ ಕೋಲ್ಕತಾದಿಂದ ನವದೆಹಲಿಯ ಇ.ಡಿ ಕಚೇರಿಗೆ ಹಾಜರಾಗಬೇಕೆಂಬ ಸಮನ್ಸ್ ಅನ್ನು ಪ್ರಶ್ನಿಸಿ ಬ್ಯಾನರ್ಜಿ ದಂಪತಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ಜಸ್ಟೀಸ್ ಬೇಲಾ ತ್ರಿವೇದಿ ಮತ್ತು ಜಸ್ಟೀಸ್ ಸತೀಶ್ ಚಂದ್ರ ಶರ್ಮಾ ಅವರು ಆಗಸ್ಟ್ 13ರಂದು ತೀರ್ಪನ್ನು ಕಾಯ್ದಿರಿಸಿದ್ದು, ಸೋಮವಾರ ತೀರ್ಪನ್ನು ಪ್ರಕಟಿಸಿಸಲಾಗಿದೆ.
ಪಶ್ಚಿಮಬಂಗಾಳದ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಉದ್ಯೋಗ ನೀಡಲು ಲಂಚ ಪಡೆದಿರುವ ಈ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಪತ್ನಿ ರುಚಿರಾ ಶಾಮೀಲಾಗಿರುವುದಾಗಿ ಆರೋಪಿಸಲಾಗಿದೆ.
ಈ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ವಿಪಕ್ಷಗಳನ್ನು ರಾಜಕೀಯವಾಗಿ ಗುರಿಯಾಗಿರಿಸಕೊಂಡು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.