ಮನೆ ಅಪರಾಧ ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ; ಮುಂಬೈ ಮಹಿಳೆ ಸೆರೆ

ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ; ಮುಂಬೈ ಮಹಿಳೆ ಸೆರೆ

0

ಮಹಾರಾಷ್ಟ್ರ: ಅಂತಾರಾಷ್ಟ್ರೀಯ ಉದ್ಯೋಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಸೈಬರ್‌ ಕ್ರೈಂ ಪೊಲೀಸರು ಮುಂಬೈನ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ನಡೆದಿದೆ.

Join Our Whatsapp Group

ಉದ್ಯೋಗ ನೀಡುವ ಆಮೀಷದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಕಾಂಬೋಡಿಯಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಚೆಂಬೂರ್‌ ನ ಪ್ರಿಯಾಂಕಾ ಶಿವಕುಮಾರ್‌ ಸಿದ್ಧು (30ವರ್ಷ) ಎಂಬಾಕೆಯನ್ನು ಬಂಧಿಸಲಾಗಿದೆ.

ತೆಲಂಗಾಣ ಸೈಬರ್‌ ಸೆಕ್ಯೂರಿಟಿ ಬ್ಯುರೋದ ಮಾಹಿತಿ ಪ್ರಕಾರ, ಪ್ರಿಯಾಂಕಾ ಉದ್ಯೋಗಾಕಾಂಕ್ಷಿಗಳಿಗೆ ಕಠಿನ ಷರತ್ತು ವಿಧಿಸುವ ಮೂಲಕ ಉದ್ಯೋಗ ನೀಡುವ ಭರವಸೆ ನೀಡುತ್ತಿದ್ದಳು ಎಂದು ತಿಳಿಸಿದೆ.

ಈಕೆ ಪರವಾನಿಗೆ ರಹಿತ ಏಜೆನ್ಸಿಯನ್ನು ಆರಂಭಿಸಿ, ಇದರ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಾನೂನುಬದ್ಧ ಉದ್ಯೋಗ ವೀಸಾ ನೀಡುವ ಭರವಸೆ ನೀಡುತ್ತಿದ್ದಳು ಎಂದು ವರದಿ ವಿವರಿಸಿದೆ.

ವರದಿಯ ಪ್ರಕಾರ, ಪ್ರಿಯಾಂಕಾ ವಂಚನೆ ಜಾಲದಲ್ಲಿ ಜಿತೇಂದ್ರ ಶಾ, ನಾರಾಯಣ ಹಾಗೂ ಕಾಂಬೋಡಿಯಾದಲ್ಲಿನ ಚೀನಾ ಮೂಲದ ಕಂಪನಿಯ ನಿರ್ದೇಶಕ ಶಾ ಪ್ರಮುಖ ರೂವಾರಿಯಾಗಿದ್ದಾರೆ ಎಂದು ತಿಳಿಸಿದೆ.

ಉದ್ಯೋಗಾವಕಾಶದ ವಿವರಕ್ಕಾಗಿ ಪ್ರಿಯಾಂಕಾ ಕಾಂಬೋಡಿಯಾಕ್ಕೆ ತೆರಳುತ್ತಿದ್ದು, ಪ್ರತಿ ಒಂದು ಉದ್ಯೋಗದ ಆಫರ್‌ ಗಾಗಿ ಆಕೆಗೆ 42,000 ರೂಪಾಯಿ ಕಮಿಷನ್‌ ನೀಡಲಾಗುತ್ತಿತ್ತು. ಹೀಗೆ ವಂಚನೆಗೈದಿರುವ ಈಕೆ ವಿರುದ್ಧ ತೆಲಂಗಾಣ ಸೈಬರ್‌ ಕ್ರೈಂ ಪೊಲೀಸರು, ಮಾನವ ಕಳ್ಳಸಾಗಣೆ ಮತ್ತು ಸೈಬರ್‌ ಕ್ರೈಂ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿರುವುದಾಗಿ ವರದಿ ವಿವರಿಸಿದೆ.