ಮನೆ ರಾಜಕೀಯ ಮಹಿಳೆ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ದಲಿತರ ನಿವೇಶನ ಕಬಳಿಕೆ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ...

ಮಹಿಳೆ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ದಲಿತರ ನಿವೇಶನ ಕಬಳಿಕೆ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆರೋಪ‌

0

ಬೆಂಗಳೂರು: ಮೂಡ ನಿವೇಶನಗಳನ್ನು ಕಬಳಿಸಿದ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ಹಗರಣ ಜನಮಾನಸದಲ್ಲಿ ಮಾಸುವ ಮುನ್ನವೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಭೂ ಕಬಳಿಕೆ ಆರೋಪ ಮಾಡಿದ್ದಾರೆ.

ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ಮೂಡದಿಂದ ಹಂಚಿಕೆ ಆಗಿದ್ದ ದಲಿತರೊಬ್ಬರ ನಿವೇಶನ ಕಬಳಿಸಿ ಮನೆ ಕಟ್ಟಿಸಿದ್ದಾರೆ. ಬಳಿಕ ಆ ಮನೆಯನ್ನು ಮಾರುವ ನಾಟಕ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದರು.

“ಈ ರಾಜ್ಯಕ್ಕೆ ಉಪ ಮುಖ್ಯಮಂತ್ರಿ ಆಗಿದ್ದಾಗ ನೀವು ಯಾರ ಜಾಗವನ್ನು ಲಪಟಾಯಿಸಿ ಮನೆ ಕಟ್ಟಿದಿರಿ ಸ್ವಾಮಿ? ಅದರ ದಾಖಲೆ ಬೇಕಾ ನಿಮಗೆ? ದಲಿತರಿಗೆ ಮೂಡದಿಂದ ಹಂಚಿಕೆ ಆಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು ಎಂಬುದನ್ನು ಸ್ವಲ್ಪ ಹೇಳುತ್ತೀರಾ? 15 ನಿವೇಶನ ಬರೆಸಿಕೊಂಡಿರುವುದು ಅಷ್ಟೇ ಅಲ್ಲ, ಅದಕ್ಕೆ ಮೀರಿದ ಹಗರಣಗಳನ್ನು ಇವರು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರು.

ಸುಳ್ಳು ದಾಖಲೆ ಸೃಷ್ಟಿಸಿದ್ದ ಸಿದ್ದರಾಮಯ್ಯ

ದಲಿತ ವಿಶೇಷಚೇತನರೊಬ್ಬರಿಗೆ ಬಳಿ ₹24,000 ಕಟ್ಟಿಸಿಕೊಂಡು ಮೂಡದಲ್ಲಿ ಸೈಟ್ ಹಂಚಿಕೆ ಮಾಡಲಾಗಿತ್ತು. ಆ ಜಾಗದ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ಸಾಕಮ್ಮ ಎಂಬುವವರ ಹೆಸರಿನಲ್ಲಿ 10 ಸಾವಿರ ಚದರ ಅಡಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರು ಇವರು. ಆಮೇಲೆ ನಿವೇಶನದ ನಿಜ ಮಾಲೀಕರು ಬಂದು ನೋಡಿದರೆ ಅಲ್ಲಿ ಮನೆ ಕಟ್ಟಲಾಗಿತ್ತು. ಈ ಬಗ್ಗೆ  ಜನ ಮರೆತಿರಬಹುದು, ಈ ಕುಮಾರಸ್ವಾಮಿ ಬಳಿ ಈಗಲೂ ದಾಖಲೆ ಇದೆ ಎಂದು ಕೇಂದ್ರ ಸಚಿವರು ಹೇಳಿದರು.

ನನ್ನ ಜೀವನ ತೆರದ ಪುಸ್ತಕ ಎಂದು ಯಾವಾಗಲೂ ಹೇಳುತ್ತಾರೆ ಅವರು. ಆ ತೆರೆದ ಪುಸ್ತಕವನ್ನು ಜನ ಒಮ್ಮೆ ತೆರೆದು ನೋಡಬೇಕು. ನಿವೇಶನ ಹೊಡೆದುಕೊಂಡರು, ಆಮೇಲೆ ಅಕ್ರಮವಾಗಿ ಮನೆ ಕಟ್ಟಿಕೊಂಡರು, ನಂತರ ಅದನ್ನು ಯಾರಿಗೆ ಮಾರಾಟ ಮಾಡಿದರು? ಇಷ್ಟಕ್ಕೂ ಯಾರಿಗೆ ಮಾಡಿದರು? ಈಗ ಯಾರ ಬಾಕಿ ಇದೆ ಅದು? ಸುಮ್ಮನೆ ಜನರ ಕಣ್ಣಿಗೆ ಮಂಕುಬೂದಿ ಎರಚಲು ಮಾರಾಟ ಎಂದು  ತೋರಿಸಿಕೊಂಡಿದ್ದಾರೆ. ಎಲ್ಲವನ್ನೂ ತೆಗೆದು ನೋಡಿದರೆ ಅಸಲಿ ಬಣ್ಣ ಗೊತ್ತಾಗುತ್ತದೆ. ಆಗ ಇನ್ನೊಂದು ಹಗರಣ ಶುರುವಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರು.

ಸಾಲ ಮನ್ನಾ ಮಾಡಿದ್ದು ಯಾರು?

ರೈತರಿಗೆ ಕುಮಾರಸ್ವಾಮಿ ಏನು ಮಾಡಿದರು? ಎಂದು ಕೇಳಿದ್ದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವರು; ಅವರು ರೈತರ ಸಾಲಮನ್ನಾ ಮಾಡಿದ್ರಾ? ಈ ಕುಮಾರಸ್ವಾಮಿ ಮಾಡಿದ್ದು ಎಂದು ಸಿಎಂಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರೋತ್ಸಾಹಧನ ನಾನೇ ಕೊಟ್ಟಿದ್ದು ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳೇ, ಈ  ಪ್ರೋತ್ಸಾಹ ಧನ ಚಿಂತನೆ ಮಾಡಿದ್ದು ಯಡಿಯೂರಪ್ಪ ಅವರು. ಎರಡು ರೂಪಾಯಿ ಕೊಡುವ ವ್ಯವಸ್ಥೆ ತಂದಿದ್ದರು ಅವರು. ನಾನು ಎರಡನೇ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಪ್ರೋತ್ಸಾಹ ಧನ ₹6 ಮಾಡಬೇಕು ಎಂದು ತೀರ್ಮಾನ ತಗೊಂಡೆ. ಆಗ ನೀವೆಲ್ಲ ಸೇರಿ ಸರ್ಕಾರ ತೆಗೆದಿರಿ ಎಂದು ಅವರು ದೂರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.