ಮೈಸೂರು: ಸಾಮಾಜಿಕ ಹೋರಾಟಗಾರ ಆರ್.ಎನ್.ಸತ್ಯನಾರಾಯಣ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಕ್ಯಾಂಪಸ್‌ನಲ್ಲಿರುವ ಆರೋಗ್ಯ ಕೇಂದ್ರವನ್ನು ಶುಕ್ರವಾರ ಅಧಿಕೃತವಾಗಿ ಮುಚ್ಚಲಾಗಿದೆ.
ಈ ಆರೋಗ್ಯ ಕೇಂದ್ರದಲ್ಲಿನ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸತ್ಯನಾರಾಯಣ ಅವರು ಕಳೆದ ಜೂನ್ ನಲ್ಲಿ ದೂರು ನೀಡಿದ್ದರು. ಜತೆಗೆ ಆರೋಗ್ಯ ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಹಲವಾರು ಅಕ್ರಮಗಳನ್ನು ಬಹಿರಂಗಪಡಿಸಿದ್ದರು.
ಸತ್ಯನಾರಾಯಣ ಅವರ ದೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಕ್ತ ಅನುಮೋದನೆ ಪಡೆಯದೆ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರದ ಕಾನೂನುಬದ್ಧತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಹೆಚ್ಚುವರಿಯಾಗಿ, ಕೇಂದ್ರದ ಆಯುರ್ವೇದ ವೈದ್ಯರು 2007 ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯಿದೆಯನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಅಲೋಪತಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಇತ್ತೀಚಿನ ಕೆಪಿಎಂಇ ಸಭೆಯಲ್ಲಿ ಈ ಸಮಸ್ಯೆಯನ್ನು ಗಮನಕ್ಕೆ ತರಲಾಯಿತು. ಈ ವೇಳೆ ಡಿಎಚ್‌ಒ ಅವರು ಆರೋಗ್ಯ ಕೇಂದ್ರ ಮುಚ್ಚುವಂತೆ ಸೂಚಿಸಿದರು.
ಕೆಎಸ್‌ಒಯು ರಿಜಿಸ್ಟ್ರಾರ್ ಶುಕ್ರವಾರ ಡಿಹೆಚ್ ಓಗೆ ಬರೆದ ಔಪಚಾರಿಕ ಪತ್ರದಲ್ಲಿ, ನಿರ್ದೇಶನದಂತೆ ಆರೋಗ್ಯ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ.