ಮನೆ ರಾಜ್ಯ ಸಾಮ್ರಾಟ್ ಅಶೋಕ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸಚಿವ ಸಂಪುಟ ಒಪ್ಪಿಗೆ

ಸಾಮ್ರಾಟ್ ಅಶೋಕ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸಚಿವ ಸಂಪುಟ ಒಪ್ಪಿಗೆ

0

ಮಸ್ಕಿ: ಸಾಮ್ರಾಟ್ ಅಶೋಕನನ್ನು ಜಗತ್ತಿಗೆ ಪರಿಚಯಿಸಿದ ಮಸ್ಕಿ ಪಟ್ಟಣದ ಇತಿಹಾಸ ಪ್ರಸಿದ್ಧವಾದ ಅಶೋಕ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.

Join Our Whatsapp Group

ಮಂಗಳವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸಲ್ಲಿಸಿದ ಪ್ರವಾಸಿ ತಾಣಗಳ ಅಭಿವೃದ್ಧಿ ಪಟ್ಟಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಅದರಲ್ಲಿ ಮಸ್ಕಿ ಶಾಸನ ಸ್ಥಳದ ಅಭಿವೃದ್ಧಿ ₹10 ಕೋಟಿ ಪ್ರಸ್ಥಾವನೆಯೂ ಸೇರಿರುವುದು ಪಟ್ಟಣದ ಜನರಲ್ಲಿ ಸಂತಸ ಮೂಡಿಸಿದೆ.

 ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದ ಅಶೋಕನ ಶಿಲಾ ಶಾಸನದ ಸ್ಥಳ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎಂಬ ಇಲ್ಲಿಯ ಜನರ ಬಹುದಿನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ಹೇಳಿದ್ದಾರೆ.

2019ರಲ್ಲಿಯೇ ಶಾಸನದ ಸ್ಥಳದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಬಿಡುಗಡೆ ಮಾಡಿಸಲಾಗಿತ್ತು. ಶಾಸನದ ಮುಂದೆ ಎರಡು ಎಕರೆ ಜಾಗವನ್ನು ಖರೀದಿಸಲಾಗಿತ್ತು. ಆದರೆ, ಪುರಾತತ್ವ ಇಲಾಖೆಯ ಬಿಗಿಯಾದ ಕಾನೂನಿನಿಂದ ₹50 ಲಕ್ಷ ಮಾತ್ರ ಬಳಕೆಯಾಗಿದ್ದು, ಇನ್ನೂ ₹50 ಲಕ್ಷ ಖರ್ಚಾಗದೆ ಉಳಿದಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.

1915ರಲ್ಲಿ ಪಟ್ಟಣದಿಂದ 2 ಕಿ.ಮೀ ದೂರದಲ್ಲಿನ ಬೆಟ್ಟದಲ್ಲಿ ಈ ಶಾಸನವನ್ನು ಸಂಶೋಧಕ ಬೀಡನ್ ಎಂಬುವರು ಪತ್ತೆ ಹಚ್ಚಿದ್ದರು. ಬ್ರಾಹ್ಮಿಲಿಪಿಯಲ್ಲಿರುವ ಈ ಶಾಸನವು ಅಶೋಕನನ್ನು ದೇವನಾಂಪ್ರೀಯ ಅಶೋಕ ಎಂದು ಗುರುತಿಸಿದ ಶಾಸನವಾಗಿದೆ. ಈ ಶಾಸನಕ್ಕೆ ಈಗಾಗಲೇ 109 ವರ್ಷ ಪೂರ್ಣಗೊಂಡಿದೆ. ಸರ್ಕಾರ ಈಗಲಾದರೂ ಇದರ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ತಿಳಿಸಿದ್ದಾರೆ.