ಮನೆ ಅಪರಾಧ ಸ್ನೇಹಿತರೊಂದಿಗೆ ಈಜಲು ಹೋಗಿ ವಿದ್ಯಾರ್ಥಿ ಸಾವು

ಸ್ನೇಹಿತರೊಂದಿಗೆ ಈಜಲು ಹೋಗಿ ವಿದ್ಯಾರ್ಥಿ ಸಾವು

0

ಮೈಸೂರು (Mysuru)- ಈಜಲು ಹೋಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಳ್ತೋರು ಗ್ರಾಮದಲ್ಲಿ ನಡೆದಿದೆ.
ಚಿಲ್ಕುಂದ ಗ್ರಾಮದ ನಿವಾಸಿ ಮಂಜುನಾಥ್- ಶೈಲಜ ದಂಪತಿ ಪುತ್ರ ಹರ್ಷ (14) ಮೃತಪಟ್ಟ ವಿಧ್ಯಾರ್ಥಿ.
ಈತ ಸಂತಜೋಸೆಫರ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಶಾಲೆಗೆ ಚಕ್ಕರ್ ಹೊಡೆದು ಐವರು ಸ್ನೇಹಿತರು ಕೆ.ಆರ್ ನಗರ ರಸ್ತೆಯ ಕರ್ನಾಟಕ ಉಲ್ಲನ್ ಫ್ಯಾಕ್ಟರಿ ಹಿಂಭಾಗದಲ್ಲಿರುವ ಬೆಳ್ತೂರು ಕೆರೆಯಲ್ಲಿ ಈಜಲು ನೀರಿಗೆ ಇಳಿಯುತ್ತಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಇದನ್ನು ಕಂಡ ದಡದಲ್ಲಿದ್ದ ಸ್ನೇಹಿತರು ಹೆದರಿಕೆಯಿಂದ ದಡದಲ್ಲೇ ಶಾಲೆಯ ಸಮವಸ್ತ್ರವನ್ನು ಬಿಟ್ಟು ಓಡಿ ಹೋಗಿದ್ದಾರೆ. ಕೆರೆ ಕಡೆಯಿಂದ ಯುವಕರು ಓಡುತ್ತಿರುವುದನ್ನು ಕಂಡ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಿಪ್ಪಲಾಪುರದ ರೈತರು ಕೆರೆ ದಡಕ್ಕೆ ಬಂದು ನೋಡಿದ ವೇಳೆ ಶಾಲಾ ಸಮವಸ್ತ್ರವನ್ನು ಕಂಡು ತಕ್ಷಣವೇ ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ಪೋನಾಯಿಸಿ ಮಾಹಿತಿ ನೀಡಿದ್ದಾರೆ.
ಶಾಲಾ ಸಮವಸ್ತ್ರದ ಜೊತೆಗೆ ಗುರುತಿನ ಕಾರ್ಡ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ‌ಮಾಡಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಕೆರೆಯಲ್ಲಿ ಹುಡುಕಾಟ ನಡೆಸಿ ಯುವಕನ ಶವವನ್ನು‌ ಮೇಲೆತ್ತಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಎಸ್.ಐ. ಜಮೀರ್ ಅಹಮದ್‌ ಭೇಟಿ ನೀಡಿ ಮಹಜರ್ ನಡೆಸಿ ಶವವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.