ಮನೆ ಸ್ಥಳೀಯ ನಾಡಹಬ್ಬ ಮೈಸೂರು ದಸರಾದ ಅದ್ದೂರಿ ಆಚರಣೆಗೆ ಭರಪೂರ ಸಿದ್ಧತೆ: ಡಾ.ಹೆಚ್.ಸಿ.ಮಹದೇವಪ್ಪ

ನಾಡಹಬ್ಬ ಮೈಸೂರು ದಸರಾದ ಅದ್ದೂರಿ ಆಚರಣೆಗೆ ಭರಪೂರ ಸಿದ್ಧತೆ: ಡಾ.ಹೆಚ್.ಸಿ.ಮಹದೇವಪ್ಪ

0

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅದಕ್ಕೆ ಅರಮನೆ ನಗರಿ ನಮ್ಮ ಮೈಸೂರಿನಲ್ಲಿ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ ಮಹದೇವಪ್ಪ ಅವರು ತಿಳಿಸಿದರು.

Join Our Whatsapp Group

ಇಂದು ಜಿಲ್ಲಾ ಪಂಚಾಯಿತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಿದ್ಧತೆ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯಿಂದಾಗಿ ಕಳೆದ ವರ್ಷ ದಸರಾ ಹಬ್ಬವನ್ನು ಸರಳವಾಗಿ, ಸಾಂಪ್ರದಾಯಿಕ ಆಚರಿಸಲಾಗಿತ್ತು. ಆದರೆ, ಈ ವರ್ಷ ಉತ್ತಮ ಮುಂಗಾರು ಮಳೆ ಆಗಿರುವುದರಿಂದ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದರು.

ಈ ಬಾರಿಯ ನಾಡಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಬೇಕಾಗಿರುವುದರಿಂದ, ನೇಮಕ ಗೊಂಡಿರುವ 19 ದಸರಾ ಉಪಸಮಿತಿಗಳು ಎಲ್ಲಾ ರೀತಿಯ ಸಿದ್ಧತೆಯನ್ನು ಅಧಿಕಾರಿಗಳಿಗಳು ಮಾಡಿಕೊಳ್ಳಬೇಕು. ಅಲ್ಲದೆ ಈ ಬಾರಿ ದಸರಾದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಿಂಬಿಸುವ ಕಲಾಕೃತಿಗಳು ಹಾಗೂ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸ್ಥಬ್ಧ ಚಿತ್ರಗಳು ಪ್ರದರ್ಶನ ಗೊಳ್ಳಬೇಕು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಮಾತನಾಡಿ, ಕಳೆದ ಬಾರಿ ಆಗಿರುವ ನ್ಯೂನತೆಗಳನ್ನು ಈ ಬಾರಿ ಸರಿಪಡಿಸಿಕೊಂಡು ಯಾವುದೇ ಅಡಚಣೆ ಹಾಗೂ ತೊಂದರೆ ಉಂಟಾಗದಂತೆ ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಬೇಕು. ಈ ಬಾರಿಯ ವಿಶ್ವ ವಿಖ್ಯಾತ ದಸರಾ
ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕ ಸಂಭ್ರಮ:೫೦, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಿಂಬಿಸುವ ಕಲಾಕೃತಿಗಳನ್ನು ರಚಿಸಬೇಕು ಹಾಗೂ ಕಳೆದ ಬಾರಿ ಪ್ರದರ್ಶನ ಗೊಂಡಿರುವ ಮರು ಸ್ಥಬ್ಧಚಿತ್ರ ಮತ್ತು ಕಲಾ ತಂಡಗಳ ಮೆರವಣಿಗೆಗಳು ಮರು ಪ್ರದರ್ಶನವಾಗಬಾರದು ಎಂದು ಹೇಳಿದರು.

ದಸರಾದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ಎಚ್ಚರಿಕೆ ವಹಿಸಿ, ದಸರಾ ವೀಕ್ಷಿಸಲು ಬಂದಂತಹ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ನಿರಾಸೆಯಾಗದಂತೆ ಅದ್ದೂರಿಯಾಗಿ ಎಲ್ಲಾ ಕಾರ್ಯಕ್ರಮಗಳು ಜರುಗುವಂತೆ ನೋಡಿಕೊಳ್ಳಬೇಕು. ಉಪಸಮಿತಿಯಲ್ಲಿನ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಿ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ ಪುಷ್ಪ ಅಮರನಾಥ್, ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ , ವಿಧಾನ ಪರಿಷತ್ನ ಶಾಸಕರಾದ ಡಾ.ಯತೀಂದ್ರ, ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಕೆ ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿಗಳಾದ ಪಿ ಶಿವರಾಜು, ಜಿಲ್ಲಾ ಪೊಲೀಸ್ ಆಯುಕ್ತರಾದ ಸಿಮಾ ಲಾಟ್ಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯದ ವಿಷ್ಣುವರ್ಧನ್, ದಸರಾ 19 ಉಪ ಸಮಿತಿಯ ಕಾರ್ಯದರ್ಶಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.