ಮನೆ ದೇವಸ್ಥಾನ ಜಾನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

ಜಾನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

0

   ನಮ್ಮ ಪೂರ್ವಿಕರು ರಸಿಕತೆಯ ಜೊತೆಗೆ ವೇಧಾವಿಗಳೂ ಆಗಿದ್ದರು.ಜೀವನದ ಸಣ್ಣಪುಟ್ಟ ಶುಭ ಸಂದರ್ಭದಲ್ಲಿ ಅವರು ರಸವತ್ತಾಗಿ ಅನುಭವಿಸಿ ಆನಂದಿಸುತ್ತಿದ್ದರು. ಇದು ಅವರ ಜೀವನದ ಪ್ರತಿಕ್ಷಣವನ್ನೂ ಅವಲಂಬಿಸಿತ್ತು. ಬೀಸುವಾಗ, ಕಟ್ಟುವಾಗ,ನೇಯುವಾಗ, ನೆಟ್ಟಿ ನೀಡುವಾಗ, ಪೂಜಿಸುವಾಗ, ಅಡಿಕೆ ಮಾಡುವಾಗ,ಹೀಗೆ ಯಾವುದೇ ಕೆಲಸ ಮಾಡುವ ಸಂದರ್ಭವನ್ನು ಆನಂದದಿಂದ ಅನುಭವಿಸುವುದನ್ನು ಅವರು ಅರಿತಿದ್ದರು ಅಂತೆಯೇ ತೊಟ್ಟಿಲು ತಗುವುದರಿಂದ ಪ್ರಾರಂಭಿಸಿ ಕಿವಿ ಚುಚ್ಚುವುದು, ನಾಮಕರಣ,ಚೌಲ ಉಪಯಾನ, ಮದುವೆ,ಶ್ರೀಮಂತ,ಹೀಗೆ ಪ್ರತಿಯೊಂದು ಸಂದರ್ಭಗಳಲ್ಲಿ ಸ್ಪೂರ್ತಿಯಿಂದ ಅದಕ್ಕೆ ಸಂಬಂಧಿಸಿದಂತೆ ಆಶು ಕವಿತೆಗಳನ್ನು ಕಟ್ಟಿ ಹಾಕುತ್ತ ನಲಿಯುತ್ತ ಜೀವನದ ತಮ್ಮ ಕಷ್ಟ ನೋವುಗಳನ್ನು ಮರೆಯಲು ಪ್ರಯತ್ನಿಸಿದ್ದಾರೆ.

Join Our Whatsapp Group

ತಾವು ರಚಿಸಿದ ಹಾಡುಗಳನ್ನು ಹಾಗೆಯೇ ನಶಿಸಿ ಹೋಗಬಾರದೆಂದು ಅವುಗಳನ್ನು  ತಮ್ಮ ಮಕ್ಕಳು,ಮೊಮ್ಮಕ್ಕಳಿಗೆ ಹೇಳಿಕೊಡುತ್ತ ಉಳಿದು ಬರಲು ಕಾರಣರವಾಗಿದ್ದಾರೆ. ತಾವು ಹಾಡುತ್ತಿದ್ದ ಹಾಡುಗಳಿಗೆ ರಾಗ, ತಾಳ, ಲಯ, ಯಾವುದರ ಬಂಧವನ್ನೂ ಹಾಕದೆ ಅವು ಸರಳವಾಗಿ, ಗೇಯ ಗೀತವಾಗಿ ಜನಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿ ಮುಂದುವರೆದುಕೊಂಡು ಬರುವಂತೆ ಮಾಡಿದ್ದಾರೆ. ಇವು ರಾಮಾ ಕೃಷ್ಣ, ವೆಂಕಟೇಶ,ಯಶೋಧ, ರುಕ್ಮಿಣಿ,ಸೀತೆ,ಪದ್ಮಾವತಿ, ಸಾವಿತ್ರಿ,ಅನ್ನಪೂರ್ಣೆ, ಶಿವ,ಗಂಗೆ, ಗೌರಿ,ನದಿಗಳು ಹೀಗೆ ಆದರ್ಶದ ವಸ್ತುಗಳನ್ನು ಬಳಸಿಕೊಳ್ಳುವುದರ ಮೂಲಕ ರಚಿತಗೊಂಡಿವೆ.

ಅವರಿಗೆ ಆ ಹಾಡುಗಳನ್ನು ರಚಿಸಿದವರ ಹೆಸರು ಬರುವಾ ಅಗತ್ಯ ಕಂಡು ಬರಲಿಲ್ಲ. ಹಾಗಾಗಿ ಇಂತಹ ಹಾಡುಗಳನ್ನು ಯಾರಿಂದ ರಚಿಸಲ್ಪಟ್ಟವು ಎಂದರೆ ಹೇಳುವುದು ಕಷ್ಟ.ಆ ಹಾಡುಗಳು ನಮ್ಮ ಸಂಸ್ಕೃತಿಯ ಅಮೂಲ್ಯ ಸಂಪತ್ತುಗಳಾಗಿವೆ. ತಮ್ಮ ಮಕ್ಕಳನ್ನು ನೀಲವೇಣಿ, ಚಂದ್ರಮುಖಿ, ಅನ್ನಪೂರ್ಣ,ಮಂದಗಮನೆ, ನಳಿನಾಕ್ಷಿ,ಚಾರುಮುಕಿ, ನಾರಿರತ್ನ, ಸುಂದರಾಂಗಿ ಮೊದಲಾಗಿ ಗಂಡು ಮಕ್ಕಳನ್ನು ಮನ್ಮಥ,ಸುಂದರಾಂಗ, ಹೀಗೆ ವರ್ಣಿಸಿರುವುದು ಕಾಣಬಹುದು. ತಮ್ಮ ರಚನೆಯಲ್ಲಿ ಹಾಸ್ಯಕ್ಕೂ ಸ್ಥಾನವನ್ನು ಕಲ್ಪಿಸಿಕೊಟ್ಟ ಆನಂದಿಸುತ್ತಿದ್ದುದಿದೆ. ಬಾಯಿ ಪಾಠ ಹೇಳಿಕೊಡುವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯದ ಹಾಡುಗಳನ್ನು ಹೇಳಿಕೊಡಲಾಗುತ್ತಿತ್ತು. ಮಂಗಳ ಕಾರ್ಯಗಳಲ್ಲಿ ಹೆಣ್ಣು ಮಕ್ಕಳ ಕಾರುಬಾರು ಹೆಚ್ಚಿತ್ತು.

ಅವರ ಉತ್ಸಾಹ ಇಂತಹ ಸಂಪ್ರದಾಯದ ಹಾಡುಗಳನ್ನು ಹಾಡುವುದರೊಂದಿಗೆ ಹೊರ ಹೊಮ್ಮುತ್ತಿತ್ತು. ಆಯಾ ಸಂದರ್ಭಕ್ಕೆ  ಕ್ಷಿಪ್ರಗತಿಯಲ್ಲಿ ಹಾಡನ್ನು ಹೆಣೆಯುವ ಜಾಣ್ಮೆ ಅವರಿಗಿತ್ತು ಹುಟ್ಟಿದ ಮಗುವಿಗೆ ಪ್ರಥಮವಾಗಿ ಅನ್ನವನ್ನು ತಿನ್ನಿಸುವ ಸಂದರ್ಭವನ್ನೂ ಅವರು ಸಂಪ್ರದಾಯಿಕ ನೆಲೆಯಿಂದಲೇ ಪ್ರಾರಂಭಿಸುತ್ತಿದ್ದರು. ಒಂದು ಶುಭದಿನ ಗೊತ್ತುಮಾಡಿಕೊಂಡು ಮಗುವಿನ ತಂದೆ ತಾಯಿಯರು ಒಟ್ಟಿಗೆ ಹೋಮವಾದಿಗಳನ್ನು ಮಾಡಿ ಅನ್ನದೊಳಗೆ ಜೇನುತುಪ್ಪ,  ತುಪ್ಪ,ಹಾಲು, ಕೆನೆ ಮೊಸರು,ಸೇರಿಸಿ ಮಗುವಿಗೆ ತಿನ್ನಿಸಲಾಗುತ್ತಿತ್ತು.ಆ ಸಂದರ್ಭದಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿತ್ತು. ಶಕ್ತಿಯ ರಕ್ತದ ಪ್ರತೀಕವಾದ ಅನ್ನಪೂರ್ಣೆ ಆರಾಧನೆಯೊಂದಿಗೇ ಬದುಕು ಪ್ರಾರಂಭವಾಗಿಸಲು ಮುಂದಾಗುತ್ತಿದ್ದರು.ಇಂತಹ ಸಂದರ್ಭದಲ್ಲಿಯೂ ಹಾಡು ಹಸೆ ಮೂಲಕ ಸಂತೋಷಪಡುತ್ತಿದ್ದರು.ಇಂತಹ ಹಾಡುಗಳನ್ನು ನಾವು ನಾಶವಾಗುವ ಮುಂಚೆ ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸುವ ಅಗತ್ಯ ಬಹಳ ವಿದೆ.

   ಇಂತಹ ಸಂದರ್ಭದಲ್ಲಿ ಹಾಡುತ್ತಿದ್ದ ಕೆಲವು ಹಾಡುಗಳು ಇತಿಹಾಸ ರಚನೆಗೂ ಸಹಕಾರಿಯಾಗಿರುವುದಿದೆ. ಕವಿ ಪರಮದೇವನ ಹಾಡುಗಳು ಕೆಳದಿಮರಾಠ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಸಹಕಾರಿಯಾಗಿವೆ. ಅಂತೆಯೇ ಲಾವಣಿ,ಕೋಲಾಟದ ಪದಗಳಲ್ಲಿಯೂ ಇತಿಹಾಸ ರಚನೆಗೆ ಆಕರಗಳು ದೊರೆಯುವುದಿದೆ.ಅದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಹೊರನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಕೆಲವು ಹಾಡುಗಳು ಲಭ್ಯವಾಗಿವೆ.ಇವು ಸೊರಬದ ಶ್ರೀಮತಿ ಜಾನಕಮ್ಮನವರಿಗೆ ಹೊರನಾಡು, ಶೃಂಗೇರಿ,ಕಳಸ, ಕೊಲ್ಲೂರು, ಈ ಮೊದಲಾದ ಕ್ಷೇತ್ರಗಳ ಕುರಿತು ಅಪಾರವಾದ ಭಕ್ತಿ ಗೌರವ. ಇದರ ತಾಯಿ ಕೆಳದಿ ಇತಿಹಾಸದಲ್ಲಿ ಪ್ರಮುಖನಾಗಿದ್ದ ಲಿಂಗಣ್ಣ ಕವಿ ಮನೆತನದ ಶ್ರೀಮತಿ ಮೂಕಾಂಬಿಕ್ಕಮ್ಮನವರು.ಇವರಿಗೂ ಕೊಲ್ಲೂರು, ಹೊರನಾಡಿನ ಕುರಿತು ಅಪಾರವಾದ ಭಕ್ತಿ. ಇವರು ಸಾಕಷ್ಟು ಹಾಡುಗಳನ್ನು ಹಾಡುತ್ತಿದ್ದರು. ಅದರೆ ಅವು ಯಾವುವು ಲಭ್ಯವಿಲ್ಲ.ಅವರಿಂದ ಅವರ ಹಿರಿಯರ ಮಗಳು ಜಾನಕಮ್ಮ ಕೆಲವು ಹಾಡುಗಳನ್ನು ಕಲಿತು ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದವರಾಗಿದ್ದರು.ಕಳೆದ ವರ್ಷ ತಮ್ಮ 95 ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದ ಇವರು ಹೇಳಿತ್ತಿದ ಹಾಡುಗಳನ್ನು ಅಕಸ್ಮಾತ್ ಅವರ 94ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕಲ್ಯಾಣ ಮಂಟಪ ವೂಂದರಲ್ಲಿ ಒಬ್ಬರು ರೆಕಾರ್ಡ್ ಮಾಡಿಕೊಂಡಿದ್ದರು. ವಯೋ ಸಹಜ ಕಾರಣದಿಂದ ನುಡಿ ಅಸ್ಪಷ್ಟವಾಗಿತ್ತು. ಆದರೂ ಈ ಹಾಡುಗಳು ಹೊರನಾಡಿನ ಅನ್ನಪೂರ್ಣೆಯ ಬಗೆ ವಿಶೇಷ ಬೆಳಕು ಚೆಲ್ಲುವುದರಲ್ಲಿ ಎರಡು ಮಾತಿಲ್ಲ.ಈಗ ದೊರೆತಿರುವ ಹಾಡೊಂದರಲ್ಲಿ ಪುರಂದರ ವಿಠಲ ಪನ್ನಂಗಶಯನನ ಧ್ಯಾನಿಸುತಾ ಎಂದು ಬರುತ್ತದೆ. ಈವರೆಗೆ ಇದು ಪ್ರಕಟವಾದಂತಿಲ್ಲ.ಇದು ಪುರಂದರ ರಚನೆಯೇ ಎನ್ನುವುದರ ಕುರಿತು ಇನ್ನೂ ಸಂಶೋಧನೆ ನಡೆಯಬೇಕಿದೆ.ಇಂತಹ ಹಾಡುಗಳನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮಲೆನಾಡು ಪ್ರದೇಶದಲ್ಲಿ ಹವ್ಯಕ ಜನಾಂಗದವರು ಸಂಪ್ರದಾಯಿಕವಾಗಿ ಹಾಡುತ್ತ ಮುಂದುವರಿಕೊಂಡು ಬಂದಿರುವುದನ್ನು ಕಾಣಬಹುದು.