ಮನೆ ಅಪರಾಧ ಪಳನಿ ದೇಗುಲ ಪ್ರಸಾದದಲ್ಲಿ ಮಕ್ಕಳಾಗದೇ ಇರಲು ಬಳಸುವ ಔಷಧಿ ಮಿಶ್ರಣ: ಕಾಲಿವುಡ್ ಚಿತ್ರ ನಿರ್ದೇಶಕನ ಬಂಧನ

ಪಳನಿ ದೇಗುಲ ಪ್ರಸಾದದಲ್ಲಿ ಮಕ್ಕಳಾಗದೇ ಇರಲು ಬಳಸುವ ಔಷಧಿ ಮಿಶ್ರಣ: ಕಾಲಿವುಡ್ ಚಿತ್ರ ನಿರ್ದೇಶಕನ ಬಂಧನ

0

ಚೆನ್ನೈ: ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣದ ಕುರಿತ ವಿವಾದ ಇನ್ನೂ ಹಸಿರಾಗಿರುವಂತೆಯೇ ಅತ್ತ ತಮಿಳುನಾಡಿನ ಖ್ಯಾತ ಪಳನಿ ದೇವಾಲಯ ಪ್ರಸಾದವೂ ಕಲಬೆರಕೆಯಾಗಿದೆ ಎಂದು ಖ್ಯಾತ ತಮಿಳು ಚಿತ್ರ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಆರೋಪಿಸಿದ್ದು, ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಚರ್ಚೆಯಲ್ಲಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ತಿರುಚಿ ಪೊಲೀಸರು ಬಂಧಿಸಿದ್ದು, ತಮಿಳುನಾಡಿನ ಖ್ಯಾತ ಪಳನಿ ದೇವಾಲಯದ ಪ್ರಸಾದದ ಕುರಿತಾದ ಹೇಳಿಕೆಯಿಂದಾಗಿ ಮಹೇಶ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಇನ್ನು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಮೋಹನ್ ಜಿ, ಪಳನಿ ದೇವಾಲಯದಲ್ಲಿ ನೀಡಲಾಗುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು, ಅಲ್ಲಿ ಕೆಲಸ ಮಾಡುವವರೇ ನನಗೆ ಗೊತ್ತಿರುವವರೇ ಇದನ್ನು ನನಗೆ ಹೇಳಿದ್ದರು. ಇದರ ಬಗ್ಗೆ ದೇವಾಲಯವಾಗಲಿ, ಸರ್ಕಾರವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಅಲ್ಲಿ ಕೆಲಸ ಮಾಡುತ್ತಿದ್ದವರೇ ಹೇಳಿಕೊಂಡಿರುವ ವಿಷಯ ಇದು ಎಂದು ಹೇಳಿದ್ದರು.

ವ್ಯಾಪಕ ವಿವಾದ, ತಿರುಚಿ ಪೊಲೀಸರಿಂದ ಬಂಧನ

ಇನ್ನು ಮೋಹನ್ ಅವರ ಈ ಹೇಳಿಕೆ ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದು, ಇದರಿಂದ ಎಚ್ಚೆತ್ತ ತಿರುಚ್ಚಿ ಪೊಲೀಸರು ಕೂಡಲೇ ಅವರನ್ನು ಬಂಧಿಸಿದ್ದಾರೆ. ಮೋಹನ್ ಹೇಳಿಕೆ ಆಧರಿಸಿ ತಿರುಚಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿ ತಿರುಚಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇತ್ತ ಮೋಹನ್ ಬಂಧನದ ಬೆನ್ನಲ್ಲೆ ಪಳನಿ ದೇವಾಲಯದ ಪ್ರಸಾದವನ್ನು ಸಹ ಪರೀಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಪಳನಿ ದೇವಸ್ಥಾನದ ಪಂಚಾಮೃತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಎಚ್ಚರಿಕೆ ನೀಡಿದ್ದರು.

ಬಂಧನ ಖಂಡಿಸಿದ ಬಿಜೆಪಿ

ಇದೇ ವೇಳೆ, ಮೋಹನ್ ಜಿ ಬಂಧನವನ್ನು ಖಂಡಿಸಿದ ಬಿಜೆಪಿ ನಾಯಕ ಅಶ್ವಥಾಮನ್, ‘ಇದು ಅಸಂವಿಧಾನಿಕ. ಬಂಧನ ಕಾರಣದ ಬಗ್ಗೆ ನಿರ್ದೇಶಕರ ಕುಟುಂಬಕ್ಕೂ ತಿಳಿಸಲಾಗಿಲ್ಲ. ಕಾರಣ ಏನು ಮತ್ತು ಪ್ರಕರಣ ಏನು ಎಂಬ ಬಗ್ಗೆ ಕುಟುಂಬಕ್ಕೆ ಯಾವುದೇ ಔಪಚಾರಿಕ ಮಾಹಿತಿ ನೀಡಲಾಗಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.