ಬೆಂಗಳೂರು: ಮದುವೆ ಹಾಗೂ ಮಗು ಇರುವ ವಿಚಾರವನ್ನು ಮರೆ ಮಾಚಿರುವುದು ಹಾಗೂ ಪರ ಪುರುಷರ ಜತೆ ಹೆಚ್ಚು ಆತ್ಮೀಯವಾಗಿ ಇರುವುದಕ್ಕೆ ಕೋಪಗೊಂಡಿರುವ ಮಹಾಲಕ್ಷ್ಮೀ ಪ್ರಿಯಕರ ಆಕೆಯನ್ನು ಹತೈಗೈದು, ಬಳಿಕ 59 ಪೀಸ್‌ಗಳನ್ನು ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಮುಕ್ತಿರಂಜನ್ ಪ್ರತಾಪ್ ರಾಯ್ ಹಾಗೂ ಮಹಾಲಕ್ಷ್ಮೀ ಐದಾರು ತಿಂಗಳಿಂದ ಒಂದೆಡೆ ಕೆಲಸ ಮಾಡುತ್ತಿದ್ದರಿಂದ, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮಹಾಲಕ್ಷ್ಮೀ, ತನಗೆ ಮದುವೆಯಾಗಿ, ಮಗು ಇರುವ ವಿಚಾರವನ್ನು ಪ್ರಿಯಕರ ಮುಕ್ತಿರಂಜನ್ ರಾಯ್ ಬಳಿ ಹೇಳಿಕೊಂಡಿರಲಿಲ್ಲ. ಜತೆಗೆ ಈಕೆ ಇತರೆ ಯುವಕರ ಜತೆ ಹೆಚ್ಚು ಆತ್ಮೀಯವಾಗಿದ್ದಳು. ಅಲ್ಲದೆ, ಮಹಾಲಕ್ಷ್ಮೀ ಬೇಗನೆ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಳು. ಆದರೆ, ಈ ಮಧ್ಯೆ, ಮುಕ್ತಿರಂಜನ್ ರಾಯ್ ಗೆ ಪ್ರೇಯಸಿ ಮಹಾಲಕ್ಷ್ಮೀಗೆ ಮದುವೆ ಆಗಿರುವ ವಿಚಾರ ತಿಳಿದು ಪ್ರಶ್ನಿಸಿದ್ದಾರೆ. ಆಕೆ ಸರಿಯಾಗಿ ಉತ್ತರ ನೀಡಿಲ್ಲ. ಸೆ.3ರಂದು ಆಕೆಯ ಮನೆಗೆ ಬಂದಾಗ ಅದೇ ವಿಚಾರ ಪ್ರಸ್ತಾಪಿಸಿ ಗಲಾಟೆ ಮಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಕೋಪಗೊಂಡು ಆಕೆಯನ್ನು ಚಾಕುವಿನಿಂದ ಇರಿದು ಕೊಂದು ಆಕ್ಸೈಡ್ ಬ್ಲೇಡ್‌ನಿಂದ ಆಕೆಯ ದೇಹವನ್ನು 59 ಪೀಸ್‌ಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿ ಇರಿಸಿದ್ದ. ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಟಾಯ್ಲೆಟ್ ಕ್ಲಿನರ್‌ನಿಂದ ಸ್ವಚ್ಛಗೊಳಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಇನ್ನು ಒಡಿಶಾದಲ್ಲಿರುವ ರಾಜ್ಯ ಪೊಲೀಸರು, ಮೃತನ ರಕ್ತದ ಮಾದರಿ ಹಾಗೂ ಬೆರಳಚ್ಚು ಪಡೆಯಲಿದ್ದಾರೆ. ಇನ್ನು ಅಬೈಟೆಡ್ ಚಾರ್ಜ್‌ಶೀಟ್ ಸಲ್ಲಿಕೆಗೂ ಮೊದಲು ಪ್ರಕರಣ ಸಂಬಂಧ ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಬೇಕಿದೆ. ಆರೋಪಿ ಮೊಬೈಲ್ ವಶಕ್ಕೆ ಪಡೆದು ಎಫ್ಎಸ್‌ಎಲ್‌ಗೆ ರವಾನಿಸಬೇಕಿದೆ. ಅಲ್ಲದೇ ಕೃತ್ಯದ ಸ್ಥಳದಲ್ಲಿ ಪತ್ತೆಯಾದ ರಕ್ತದ ಮಾದರಿಯನ್ನು ಲುಮಿನಾರ್ ಟೆಸ್ಟ್‌ಗೆ ಕಳುಹಿಸಲಿದ್ದಾರೆ. ಆರೋಪಿ ಸಹೋದರನ 164 ಹೇಳಿಕೆ ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಹೇಳಿಕೆ ಎಲ್ಲವನ್ನು ಅಬೈಟೆಡ್ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಕೃತ್ಯದ ನಂತರ ಮೃತದೇಹ ತುಂಡರಿಸಿ ಪರಾರಿಯಾಗುವ ವೇಳೆ ಯಾರಾದರೂ ಆರೋಪಿಗೆ ಸಹಕರಿಸಿರುವುದು ಕಂಡುಬಂದರೆ ಅವರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರೇಯಸಿ ಮಹಾಲಕ್ಷ್ಮೀ ಹತ್ಯೆ ವಿಚಾರವನ್ನು ಹೆಬ್ಬಗೋಡಿಯಲ್ಲಿರುವ ತನ್ನ ಸಹೋದರನಿಗೆ ತಿಳಿಸಿ, ಒಡಿಶಾಗೆ ಪರಾರಿಯಾಗಿದ್ದ. ಹೀಗಾಗಿ ಆತನನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲಿಸಲಾಗಿದೆ. ಇನ್ನು ಒಡಿಶಾಗೆ ತೆರಳಿದಾಗ ತನ್ನ ಪೋಷಕರಿಗೂ ಹತ್ಯೆ ವಿಚಾರವನ್ನು ತಿಳಿಸಿದ್ದು, ಮಹಾಲಕ್ಷ್ಮೀಯನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ, ಆಕೆ, ಮದುವೆ, ಮಗು ಇರುವ ವಿಚಾರವನ್ನು ಮರೆ ಮಾಚಿದ್ದಳು. ಜತೆಗೆ ಬೇರೆಯವರ ಜತೆ ಹೆಚ್ಚು ಆತ್ಮೀಯವಾಗಿದ್ದಳು ಎಂದು ಹೇಳಿಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಚಾರ್ಜ್ ಶೀಟ್ ಗೆ ಸಜ್ಜು: ಕೇಸಿಗೆ ತಾರ್ಕಿಕ ಅಂತ್ಯ ಹಂತಕ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಅಬೈಟೆಡ್ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವಾಗ ಆರೋಪಿ ಮೃತನಾದರೆ ಪ್ರಕರಣ ತಾರ್ಕಿಕವಾಗಿ ಅಂತ್ಯಗೊಳಿಸಲು ನ್ಯಾಯಾಲಯಕ್ಕೆ ಸಲ್ಲಿಸುವುದೇ ಅಬೈಟೆಡ್ ಚಾರ್ಜ್‌ಶೀಟ್. ಸಾಮಾನ್ಯವಾಗಿ ರಸ್ತೆ ಅಪಘಾತ ದಂತಹ ಪ್ರಕರಣಗಳಲ್ಲಿ ಇದನ್ನು ಸಲ್ಲಿಸಲಾಗುತ್ತದೆ. ಮಹಾಲಕ್ಷ್ಮೀ ಕೊಲೆ ಪ್ರಕರ ಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಮುಕ್ತಿರಂಜನ್ ಪ್ರತಾಪ್ ರಾಯ್ ಬಂಧಿಸಲು ನಗರ ಪೊಲೀಸರು ಆತನ ತವರೂರಿಗೆ ತೆರಳಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಮಧ್ಯೆ ಬುಧವಾರ ಬೆಳಗ್ಗೆ ಭದ್ರಕ್ ಜಿಲ್ಲೆಯ ತನ್ನ ಸ್ವಗ್ರಾಮದ ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅದಕ್ಕೂ ಮೊದಲು ಡೆತ್‌ನೋಟ್ ಬರೆದಿಟ್ಟಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ಮೃತಪಟ್ಟಿರುವುದರಿಂದ ಅಬೈಟೆಡ್ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೂ ಮುನ್ನ ತಾಯಿ ಬಳಿ ಕೊಲೆ ವಿಚಾರ ಹೇಳಿದ್ದ ಭುವನೇಶ್ವರ್: ಮಹಾಲಕ್ಷ್ಮೀ ನನ್ನ ಹಣ- ಒಡವೆ ಕಸಿದಿದ್ದಳು. ಆಕೆಯ ಪರಿಚಯಸ್ಥ ಹುಡುಗರು ನನ್ನನ್ನು ಬೆದರಿಸಿದ್ದರು. ಅವಳು ನೀಡಿದ್ದ ದೂರಿನ ಮೇರೆಗೆ ಪೊಲೀಸರೂ ನನ್ನ ಬಂಧಿಸಿದ್ದರು. ಆದರೆ ನಾನು 1 ಸಾವಿರ ರೂ. ಪೊಲೀಸರಿಗೆ ನೀಡಿ ಪಾರಾಗಿದ್ದೆ. ಮಹಾಲಕ್ಷ್ಮೀಯ ಮನೆಗೂ ಹೋಗಿ ಅವರ ಕುಟುಂಬದೊಂದಿಗೆ ಜಗಳವಾಡಿದೆ. ಆ ಬಳಿಕ ಆಕೆಯನ್ನು ನಾನು ಕೊಂದು, ಇಲ್ಲಿಗೆ ಬಂದುಬಿಟ್ಟೆ!. ಹೀಗೆಂದು ಆರೋಪಿ ಮುಕ್ತಿ ರಂಜನ್ ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ತಾಯಿ ಬಳಿ ಹೇಳಿಕೊಂಡಿದ್ದನಂತೆ. ಹೀಗೆಂದು ಆರೋಪಿ ತಾಯಿ ಮಾಹಿತಿ ನೀಡಿದ್ದಾರೆ.