ಮೈಸೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಗುರುವಾರವೂ ಪ್ರಕರಣ ದಾಖಲಾಗಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ನೀಡಿದ್ದ ಆದೇಶದ ಪ್ರತಿಯನ್ನು ಪಡೆಯಲು ಖುದ್ದಾಗಿ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಬೆಂಗಳೂರಿಗೆ ತೆರಳಿದ್ದು, ಮೈಸೂರಿಗೆ ಬಂದ ಬಳಿಕ ಶುಕ್ರವಾರ ಬೆಳಗ್ಗೆ ಸಿಎಂ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ಆದೇಶವಾದ ಬಳಿಕ ಆದೇಶ ಪ್ರತಿ ಬರಬಹುದೆಂಬ ನಿರೀಕ್ಷೆಯಲ್ಲಿ ಸಂಜೆಯವರೆಗೂ ಕಚೇರಿಯಲ್ಲೇ ಇದ್ದ ಲೋಕಾಯುಕ್ತ ಎಸ್ಪಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದರು. ಗುರುವಾರ ಬೆಳಗ್ಗೆ ಆದೇಶ ಪ್ರತಿ ಸಂಗ್ರಹಿಸಿಕೊಂಡು ಬರಲು ಖುದ್ದಾಗಿ ಬೆಂಗಳೂರಿಗೆ ತೆರಳಿದ್ದು, ಲೋಕಾಯುಕ್ತ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಮಾರ್ಗದರ್ಶನದೊಂದಿಗೆ ಕಾನೂನು ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.
ಎಸ್ ಪಿಗೆ ಬೆದರಿಕೆ ಆರೋಪ
ಮುಡಾ ಹಗರಣ ಸಂಬಂಧ ಸಿಎಂ ವಿರುದ್ಧ ಬುಧವಾರ ಜೆಡಿಎಸ್ ನಿಯೋಗದೊಂದಿಗೆ ದೂರು ನೀಡಲು ಆಗಮಿಸಿದ್ದ ವಕೀಲ ಪ್ರದೀಪ್ ಕುಮಾರ್, ಲೋಕಾಯುಕ್ತ ಎಸ್ಪಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಲು ಆಗಮಿಸಿದ್ದರು. ಆದರೆ ಎಸ್ಪಿ ಉದೇಶ್ ಇರದ ಕಾರಣ ಬರಿಗೈಯಲ್ಲಿ ಹಿಂದಿರುಗಿದರು.