ಮನೆ ಕಾನೂನು ಕೆಎಸ್‌ ಪಿಸಿಬಿ ಅಧ್ಯಕ್ಷ ಶಾಂತ್‌ ತಿಮ್ಮಯ್ಯ ಅಧಿಕಾರಾವಧಿ ಅಬಾಧಿತ; ಅರಣ್ಯ ಇಲಾಖೆ ಅಧಿಸೂಚನೆ ವಜಾಗೊಳಿಸಿದ ಹೈಕೋರ್ಟ್‌

ಕೆಎಸ್‌ ಪಿಸಿಬಿ ಅಧ್ಯಕ್ಷ ಶಾಂತ್‌ ತಿಮ್ಮಯ್ಯ ಅಧಿಕಾರಾವಧಿ ಅಬಾಧಿತ; ಅರಣ್ಯ ಇಲಾಖೆ ಅಧಿಸೂಚನೆ ವಜಾಗೊಳಿಸಿದ ಹೈಕೋರ್ಟ್‌

0

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಡಾ. ಶಾಂತ್‌ ಎ. ತಿಮ್ಮಯ್ಯ ಅವರು ನಿಗದಿಯಂತೆ 2024ರ ನವೆಂಬರ್‌ 14ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುಮತಿಸಿದೆ.

Join Our Whatsapp Group

ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯು 2024ರ ಮೇ 31ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಬೇಕು ಮತ್ತು ಕೆಎಸ್‌ಪಿಸಿಬಿ ಅಧ್ಯಕ್ಷ ಮತ್ತು ತಾಂತ್ರಿಕ ಸದಸ್ಯರಾಗಿ ಮುಂದುವರಿಯಲು ಅನುಮತಿಸಬೇಕು ಎಂದು ಕೋರಿ ಶಾಂತ್‌ ತಿಮ್ಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.

ಕೆಎಸ್‌ಪಿಸಿಬಿ ಸದಸ್ಯತ್ವದಿಂದ ಶಾಂತ್‌ ತಿಮ್ಮಯ್ಯ ಅವರನ್ನು ಮೊದಲಿಗೆ ಅನರ್ಹಗೊಳಿಸಲಾಗಿದ್ದು, ಆನಂತರ ಜಲ ಕಾಯಿದೆ ಸೆಕ್ಷನ್‌ 6(2)ರ ಅನ್ವಯ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವುದು ಸಹಜ ನ್ಯಾಯತತ್ವಕ್ಕೆ ವಿರುದ್ದವಾಗಿದೆ. ಆರೋಪ ನಿಗದಿ ಮಾಡದೇ ಮತ್ತು ಅವರ ವಾದ ಆಲಿಸದೇ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದು ಒಪ್ಪುವಂಥದ್ದಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಾಮಾನ್ಯ ಸಂದರ್ಭದಲ್ಲಿ ಸರ್ಕಾರಕ್ಕೆ ಕಾನೂನಿನ ಅನ್ವಯ ನಡೆಯುವ ಸ್ವಾತಂತ್ರ್ಯ ಕಲ್ಪಿಸಲಾಗುತ್ತದೆ. ಹಾಲಿ ಪ್ರಕರಣದಲ್ಲಿ ಅರ್ಜಿದಾರರ ಅವಧಿಯು ನವೆಂಬರ್‌ 14ರಂದು ಕೊನೆಗೊಳ್ಳಲಿದ್ದು, ಇಂದಿನಿಂದ ಒಂದು ತಿಂಗಳು ಹತ್ತು ದಿನಗಳು ಮಾತ್ರ ಬಾಕಿ ಇರುವುದರಿಂದ ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಲಾಗಿಲ್ಲ. 2021ರ ನವೆಂಬರ್‌ 15ರ ಅಧಿಸೂಚನೆಯ ಪ್ರಕಾರ ಅವರು ಕೆಎಸ್‌ಪಿಸಿಬಿ ಸದಸ್ಯ ಮತ್ತು ಅಧ್ಯಕ್ಷರಾಗಿರಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: 2020ರ ಮೇ 21ರಂದು ಕೆಎಸ್‌ಪಿಸಿಬಿಯ ಶೋಧನಾ ಮತ್ತು ಆಯ್ಕೆ ಸಮಿತಿಯು ಅಧ್ಯಕ್ಷ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. 106 ಅರ್ಜಿದಾರರ ಪೈಕಿ ಶಾಂತ್‌ ತಿಮ್ಮಯ್ಯ ಅವರನ್ನು ಮುಖ್ಯಮಂತ್ರಿ, ಅರಣ್ಯ ಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಒಳಗೊಂಡ ಶೋಧ ಮತ್ತು ಆಯ್ಕೆ ಸಮಿತಿಯು 2021ರ ಸೆಪ್ಟೆಂಬರ್‌ 11ರಂದು ನಾಮನಿರ್ದೇಶನ ಮಾಡಿತ್ತು. 2021ರ ನವೆಂಬರ್‌ 11ರಂದು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಮೂರು ವರ್ಷಗಳಿಗೆ ಅಂದರೆ 2024ರ ನವೆಂಬರ್‌ 14ರವರೆಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2023ರ ಜುಲೈ 15ರಂದು ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಆನಂತರ 2023ರ ಆಗಸ್ಟ್‌ 31ರಂದು ಶಾಂತ್‌ ತಿಮ್ಮಯ್ಯ ಅಧಿಕಾರಾವಧಿಯನ್ನು ಕಡಿತಗೊಳಿಸಿ ತಿದ್ದುಪಡಿ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಶಾಂತ್‌ ತಿಮ್ಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿತ್ತು. ಆನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಶಾಂತ್‌ ತಿಮ್ಮಯ್ಯ ಅಧಿಕಾರಾವಧಿ 2024ರ ನವೆಂಬರ್‌ 14ರವರೆಗೆ ಇರಲಿದೆ ಎಂದು ಹೇಳಲಾಗಿತ್ತು.

ಅದಾಗ್ಯೂ, ರಾಜ್ಯ ಸರ್ಕಾರವು ಶಾಂತ್‌ ತಿಮ್ಮಯ್ಯಗೆ ಮೂರು ಶೋಕಾಸ್‌ ನೋಟಿಸ್‌ ನೀಡಿತ್ತು. ಮೊದಲ ಎರಡು ಶೋಕಾಸ್‌ ನೋಟಿಸ್‌ಗಳನ್ನು ಜಲ ಕಾಯಿದೆ ಅಡಿ ನೀಡಲಾಗಿತ್ತು. ಇಲ್ಲಿ ಸಕಾರಣವಿಲ್ಲದೇ ಆರೋಪಗಳನ್ನು ಒಳಗೊಂಡ ನೋಟಿಸ್‌ ನೀಡಲಾಗಿತ್ತು. ಆನಂತರ ಶಾಂತ್‌ ತಿಮ್ಮಯ್ಯ ಅವರ ಸದಸ್ಯತ್ವ ಮತ್ತು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದನ್ನು ಹೈಕೋರ್ಟ್‌ ಪುನರ್‌ ಸ್ಥಾಪಿಸಿದೆ.