ಮನೆ ಅಪರಾಧ ವಾಲ್ಮೀಕಿ‌‌‌‌ ನಿಗಮ ಹಗರಣದಲ್ಲಿ ನಾಗೇಂದ್ರ ಪ್ರಮುಖ ಆರೋಪಿ: ಇಡಿ ಪತ್ರಿಕಾ ಪ್ರಕಟಣೆ

ವಾಲ್ಮೀಕಿ‌‌‌‌ ನಿಗಮ ಹಗರಣದಲ್ಲಿ ನಾಗೇಂದ್ರ ಪ್ರಮುಖ ಆರೋಪಿ: ಇಡಿ ಪತ್ರಿಕಾ ಪ್ರಕಟಣೆ

0

ಬೆಂಗಳೂರು, ಅ.14: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಬಳ್ಳಾರಿ ಅಭ್ಯರ್ಥಿಯ ಖರ್ಚು ಮತ್ತು ಹಾಗೂ ಬಿ.ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಇದೀಗ ಇಡಿ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಅನೇಕ ವಿಚಾರಗಳ ಬಗ್ಗೆ ಪ್ರಕಟಣೆಯಲ್ಲಿ ಬಹಿರಂಗವಾಗಿದೆ.

Join Our Whatsapp Group

187 ಕೋಟಿ ರೂ. ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ಪತ್ರಿಕಾ ಪ್ರಕಟಣೆಯಲ್ಲಿ 24 ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಿದೆ. ಪ್ರಕರಣದಲ್ಲಿ ಬಿ.ನಾಗೇಂದ್ರ ಪ್ರಮುಖ ರೂವಾರಿ ಎಂದು ಇಡಿ ಉಲ್ಲೇಖಿಸಿದೆ. ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ್, ಬ್ಯಾಂಕ್ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ವಾಲ್ಮೀಕಿ ನಿಗಮದ ಎಂಡಿ ಜೆ.ಜಿ.ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಪ್ರಕಟಣೆಯಲ್ಲಿ ತಿಳಿಸಿದೆ.

ಅವ್ಯವಹಾರ ಸಂಬಂಧ ಎಸ್ಐಟಿ ಹಾಗೂ ಸಿಬಿಐ ಪರ್ಯಾಯವಾಗಿ ತನಿಖೆ ನಡೆಸಿದ್ದು ಪತ್ತೆ ಹಚ್ಚಲಾದ 89.62 ಕೋಟಿ ಹಣವನ್ನ ಆಂಧ್ರ ಹಾಗೂ ತೆಲಂಗಾಣದ ವಿವಿಧ ಬ್ಯಾಂಕ್​ಗಳಲ್ಲಿ ನಕಲಿ ಖಾತೆಗಳಿಗೆ ವರ್ಗವಣೆ ಮಾಡಲಾಗಿದೆ. ನಗರದ ಎಂ.ಜಿ.ರೋಡ್ ನಲ್ಲಿರುವ ಯೂನಿಯನ್ ಬ್ಯಾಂಕ್ ನಿಂದ 187 ಕೋಟಿ ರೂ.ಹಣ ವರ್ಗಾವಣೆಯಾಗಿತ್ತು. ಇದರಲ್ಲಿ 43.33 ಕೋಟಿ ಹಣವನ್ನ ರಾಜ್ಯದ ಗಂಗಾ ಕಲ್ಯಾಣ ಯೋಜನೆಗೆ ಮೀಸಲಿಡಲಾಗಿತ್ತು. ಸರ್ಕಾರದ ನಿರ್ದೇಶನವನ್ನ ಗಾಳಿಗೆ ತೂರಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಗದಾಗಿ ಪರಿವರ್ತನೆ ಮಾಡಲಾಗಿತ್ತು.

ಬಳ್ಳಾರಿ ಲೋಕಸಭಾ ಚುನಾವಣೆ ವೆಚ್ಚಕ್ಕಾಗಿ ನಿಗಮದ 20.19 ಕೋಟಿ ರೂಪಾಯಿ ನಾಗೇಂದ್ರರಿಂದ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಚುನಾವಣಾ ಖರ್ಚಿನ ಜೊತೆಗೆ ವೈಯಕ್ತಿಕ ಬಳಕೆಗೆ ವಿನಿಯೋಗ ಮಾಡಿಕೊಳ್ಳಲಾಗಿದೆ. ಮಾಜಿ ಸಚಿವರ ಮನೆ ಮೇಲೆ ನಡೆಸಿದ ದಾಳಿ ವೇಳೆಗೆ ಕೆಲ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ನಾಗೇಂದ್ರ ಆಪ್ತ ವಿಜಯ್ ಕುಮಾರ್ ಮೊಬೈಲ್ ಫೋನ್ ವಶಕ್ಕೆ ಪಡೆದು ರಿಟ್ರೀವ್ ಮಾಡಲಾಗಿದ್ದು ಅದರಲ್ಲಿ ಹಣ ಹಂಚಿಕೆ ಅವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಮೊಬೈಲ್ ನಾಶ ಪಡಿಸುವುದು ಹಾಗೂ ಇನ್ನಿತರ ಆರೋಪಿಗಳಿಗೆ ಕೃತ್ಯದ ಬಾಯ್ಬಿಡದಂತೆ ಬೆದರಿಕೆ ಹಾಕಲಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.