ಮನೆ ರಾಜಕೀಯ ರೈತರ, ವಿದ್ಯಾರ್ಥಿಗಳ, ಸಾಮಾನ್ಯರ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ

ರೈತರ, ವಿದ್ಯಾರ್ಥಿಗಳ, ಸಾಮಾನ್ಯರ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ

0

ಬೆಂಗಳೂರು: ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿಲ್ಲ. ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಕೈಗೊಂಡಿದ್ದ ಪ್ರತಿಭಟನೆಯ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

Join Our Whatsapp Group

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ಹಿಂಪಡೆಯುವ ಪ್ರಕ್ರಿಯೆಯನ್ನು ಮಾಡಿದ್ದೇವೆ. ಕೋರ್ಟ್ ಒಪ್ಪಿದರೆ ವಾಪಸ್ ಆಗುತ್ತದೆ. ಇಲ್ಲವಾದರೆ ಕೇಸ್‌ಗಳು ಮುಂದುವರಿಯುತ್ತವೆ ಎಂದರು.

ನಮ್ಮ ಮುಂದೆ 56 ಕೇಸ್‌ಗಳು ಬಂದಿದ್ದವು. 43 ಕೇಸ್‌ಗಳನ್ನು ವಾಪಸ್ ಮಾಡಿದ್ದೇವೆ. ಇದರಲ್ಲಿ ಬರೀ ಅಲ್ಪಸಂಖ್ಯಾತರಿಗೆ ಸೇರಿದ ಪ್ರಕರಣಗಳಿವೆಯೇ? ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಬೇರೆಬೇರೆ ಸಂದರ್ಭಗಳಲ್ಲಿ ಪ್ರತಿಭಟನೆ ಮಾಡಿರುವ ಪ್ರಕರಣಗಳಿವೆ. ಅವೆಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿದ್ದರೆ ಅಥವಾ 43 ಪ್ರಕರಣಗಳು ಅಲ್ಪಸಂಖ್ಯಾತರಿಗೆ ಸೇರಿರುವ ಪ್ರಕರಣಗಳಾಗಿದ್ದರೆ ಬಿಜೆಪಿಯವರ ಆರೋಪವನ್ನು ಒಪ್ಪಿಕೊಳ್ಳಬಹುದಿತ್ತು. ಆ ರೀತಿ ಮಾಡಲು ಬರುವುದಿಲ್ಲ. ಎಲ್ಲವನ್ನು ಸಮಾನ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.

ಯಾವುದೇ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲು ಪ್ರಕ್ರಿಯೆ ಇದೆ. ಸುಳ್ಳು ಕೇಸ್ ದಾಖಲಿಸಿದ್ದಾರೆ, ಪೂರಕವಾದ ಸೆಕ್ಷನ್‌ಗಳನ್ನು ಹಾಕಿಲ್ಲ, ನಡೆದಿರುವ ಘಟನೆಯೇ ಬೇರೆ ಕೇಸ್ ದಾಖಲಿಸಿರುವುದೇ ಬೇರೆ ಎಂದು ಆರೋಪಿಸಿ ಮನವಿ ಕೊಟ್ಟಿರುತ್ತಾರೆ. ಇದನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿರುತ್ತಾರೆ. ಸಾಮಾನ್ಯವಾಗಿ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಮಾಡಿರುತ್ತಾರೆ. ನಮಗೆ ಬರುವ ಮನವಿಗಳನ್ನು ಇಲಾಖೆಗೆ ಕಳುಹಿಸುತ್ತೇವೆ‌. ಅವರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಸಾಕ್ಷ್ಯ ಸಂಗ್ರಹಣೆಯಲ್ಲಿ ಆದ‌ ಲೋಪದೋಷಗಳನ್ನು ಪರಿಶೀಲಿಸಿ ಸಚಿವ ಸಂಪುಟ ಉಪಸಮಿತಿ ಮುಂದೆ ತರುತ್ತಾರೆ‌.

ಸಂಪುಟ ಉಪ ಸಮಿತಿಯಲ್ಲಿ ಪ್ರಕಾರಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಹುಬ್ಬಳ್ಳಿ ಪ್ರಕಾರಣದಲ್ಲೂ ಮನವಿ ಕೊಟ್ಟಿದ್ದರು. ಅಷ್ಟೊಂದು ಜನರ ಮೇಲೆ ಪ್ರಕರಣ ದಾಖಲಿಸುವ ಅಗತ್ಯ ಇಲ್ಲ‌ ಎಂಬುದು ಚರ್ಚೆಯಾಗಿದೆ.  ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನು ಕೋರ್ಟ್‌ಗೆ ತಿಳಿಸಬೇಕು. ಕೋರ್ಟ್ ಒಪ್ಪಿದರೆ ಕೇಸ್ ವಾಪಸ್ ತೆಗೆದುಕೊಳ್ಳಲು ಸಾಧ್ಯ, ಇಲ್ಲವಾದರೆ ಇಲ್ಲ. ಈ ಎಲ್ಲ ಹಂತದಲ್ಲೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ.  ಯಾರೋ ಸಮೊಟೋ ಹೇಳಿದ್ರು ಅಂತ ವಾಪಸ್ ಪಡೆಯಲಾಗುವುದಿಲ್ಲ ಎಂದರು.

ಬಿಜೆಪಿಯವರು ಆಡಳಿತದಲ್ಲಿದ್ದಾಗಲೂ ಸಹ ಇಂತಹ ಪ್ರಕರಣಗಳಲ್ಲಿ ಬೇಕಾದಷ್ಟು ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಮಾಡಿದ್ದಾರೆ‌.‌ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿನಾಥ್ ಅವರ ವಿರುದ್ಧ ಕೇಸ್‌ಗಳಿದ್ದವು. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಕೇಸ್‌ಗಳನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿಯವರು ಯಾರ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಮಗೆ ಬರುವ ಮನವಿಗಳನ್ನ ನಾನೊಬ್ಬನೇ ಆಗಲಿ ಅಥವಾ ಮುಖ್ಯಮಂತ್ರಿಯವರಾಗಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡಲು ಹೊರಟಿದ್ದು, ಇದು ಸರಿಯಲ್ಲ. ವಿಪಕ್ಷದವರು ಆಡಳಿತದ ವಿಚಾರವಾಗಿ ಸಕರಾತ್ಮಕವಾಗಿ ವಿರೋಧಿಸಿದರೆ ಒಪ್ಪಿಕೊಳ್ಳುತ್ತೇವೆ. ನಾವು ವಿಪಕ್ಷದಲ್ಲಿದ್ದಾಗ ಸಹ ಅನೇಕ ಸಲಹೆಗಳನ್ನು ಕೊಟ್ಟಿದ್ದೇವೆ. ಅವರು ನಮಗೆ ಸಲಹೆಗಳನ್ನು ನೀಡಲಿ‌ ಎಂದರು.