ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದು ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್‌ಬಿಐ ಲೇಔಟ್ ನಿವಾಸಿಗಳಾದ ಕೋಲುಸು ಲಕ್ಷ್ಮೀ (33) ಹಾಗೂ ಗಣೇಶ್ ಕುಮಾರ್ (20) ಕೊಲೆಯಾದವರು. ಕೃತ್ಯ ಎಸಗಿದ ಬಳಿಕ ಲಕ್ಷ್ಮೀಯ ಪತಿ ಕೋಲುಸು ಗೊಲ್ಲಾ(41) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಂಧ್ರಪ್ರದೇಶದ ಶ್ರೀಕಾಕುಳಂ ಮೂಲದ ಮೂವರು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ನಾಲ್ಕೈದು ವರ್ಷಗಳಿಂದ ನಗರದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು.
ಕೋಣನಕುಂಟೆಯ ಆರ್‌ಬಿಐನ ಸೋಮೇಶ್ವರ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಮೂವರು, ಅದೇ ಕಟ್ಟಡದ ನೆಲಮಹಡಿಯ ಒಂದೇ ಕೋಣೆಯಲ್ಲಿ ಮೂವರು ವಾಸವಾಗಿದ್ದರು. ಈ ಮಧ್ಯೆ ಕೋಲುಸು ಲಕ್ಷ್ಮೀ, ಸಹೋದ್ಯೋಗಿ ಗಣೇಶ್ ಕುಮಾರ್ ಜತೆ ಆತ್ಮೀಯವಾಗಿದ್ದಳು. ಅದರಿಂದ ಪತಿ ಕೋಲುಸು ಗೊಲ್ಲಾ ಪತ್ನಿಯ ನಡವಳಿಕೆ ಬಗ್ಗೆ ಅನುಮಾನ ಬಂದಿದ್ದು, ಇದೇ ವಿಚಾರಕ್ಕೆ ದಂಪತಿ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದರು.
ಈ ನಡುವೆ ಪತ್ನಿಯ ನಡವಳಿಕೆ ಬಗ್ಗೆ ಇಸ್ರೋ ಲೇಔಟ್ ನಲ್ಲಿ ಕಟ್ಟಡ ಕಾರ್ಮಿಕರಾಗಿರುವ ನಾದಿನಿಗೆ ಕರೆ ಮಾಡಿದ ಕೋಲುಸು ಗೊಲ್ಲಾ, “ನಿನ್ನ ಸಹೋದರಿ ಬೇರೊಬ್ಬನ ಜತೆ ಆತ್ಮೀಯವಾಗಿದ್ದಾಳೆ. ಇದು ಹೀಗೆ ಮುಂದುವರಿದರೆ, ಆಕೆಯನ್ನು ಕೊಂದು, ನಾನು ಸಾಯುತ್ತೇನೆ’ ಎಂದು ಹೇಳುತ್ತಿದ್ದ. ಆದರೆ, ಆಕೆ ಆತನ ಬೆದರಿಕೆ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬುಧವಾರ ರಾತ್ರಿ ಕೂಡ ನಾದಿನಿಗೆ ಕರೆ ಮಾಡಿ, ಪತ್ನಿ ಲಕ್ಷ್ಮೀ ಹಾಗೂ ಆಕೆಯ ಪ್ರಿಯಕರ ಗಣೇಶ್ ಕುಮಾರ್‌ನನ್ನು ಕೊಂದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ.
ಆದರೆ, ನಾದಿನಿ, ಭಾವ ಮದ್ಯದ ಅಮಲಿನಲ್ಲಿ ಮಾತಾಡಬೇಡ. ಬೆಳಗ್ಗೆ ಮಾತಾಡೋಣ ಎಂದು ಕರೆ ಸ್ಥಗಿತಗೊಳಿಸಿದ್ದಾಳೆ. ಆದರೆ, ಮುಂಜಾನೆ 2 ಗಂಟೆಯಿಂದ 4 ಗಂಟೆ ಅವಧಿಯಲ್ಲಿ ದೊಣ್ಣೆಯಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನ ತಲೆಗೆ ಹತ್ತಾರು ಬಾರಿ ಹೊಡೆದು ಕೊಂದ ಆರೋಪಿ, ನಸುಕಿನ 5 ಗಂಟೆ ಸುಮಾರಿಗೆ ನಾದಿನಿಗೆ ಕರೆ ಮಾಡಿ, ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ.
ಆಗಲೂ ಆಕೆ ಕರೆ ಸ್ಥಗಿತಗೊಳಿಸಿದ್ದಾಳೆ. ಬಳಿಕ ಅದೇ ಕಟ್ಟಡದ 3ನೇ ಮಹಡಿಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಗಾರೆ ಕೆಲಸದ ಮೇಸ್ತ್ರಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದರು.