ಕೋಲಾರ: ಮತದಾರರಿಗೆ ವಿತರಿಸಲು ಸಾಗಿಸುತ್ತಿದ್ದ 4.99 ಲಕ್ಷ ಮೌಲ್ಯದ 1,980 ಬೆಡ್ ಶೀಟ್ ಗಳನ್ನು ತಾಲ್ಲೂಕಿನ ರಾಮಸಂದ್ರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಬಂಗಾರಪೇಟೆಗೆ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಬಂಗಾರಪೇಟೆಯ ರಾಜಕೀಯ ಮುಖಂಡ ಶೇಷು ಎಂಬುವರಿಗೆ ತಲುಸಲು ಬೆಡ್ ಶೀಟ್ ಗಳನ್ನು ಸಾಗಿಸುತ್ತಿರುವುದಾಗಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನವನ್ನು ಸೋಮವಾರ ಸಂಜೆ ತಡೆದು ವೇಮಗಲ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ಸುಧಾಕರ್ ಹಾಗೂ ಕಾನ್ ಸ್ಟೆಬಲ್ ಸಿದ್ದಪ್ಪ ಪರಿಶೀಲನೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆದಿದ್ದಾರೆ.
ಚುನಾವಣಾ ಸಂಬಂಧ ಮತದಾರರಿಗೆ ಅಮಿಷವೊಡ್ಡಲು ಈ ಬೆಡ್ ಶೀಟ್ ಸಾಗಿಸುತ್ತಿರುವ ಮಾಹಿತಿ ನಮಗೆ ಬಂದಿದೆ. ಬೆಡ್‌ಶೀಟ್ ವಶಪಡಿಸಿಕೊಂಡು ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.