ಬೆಂಗಳೂರು : ನಾಯಂಡಹಳ್ಳಿ ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಬಳಿ ಆಟೋ ನಿಲ್ಲಿಸೋ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ಯುವಕನನ್ನು ಗುಣ (28) ಎಂದು ಗುರುತಿಸಲಾಗಿದೆ.
ಈತನ ಸ್ನೇಹಿತನಾಗಿದ್ದ ವಿನೋದ್ ಕೊಲೆ ಆರೋಪಿಯಾಗಿದ್ದಾನೆ. ಈ ಘಟನೆಯಲ್ಲಿ ಮತ್ತೊಬ್ಬ ಯುವಕ ವೇಲು ಎಂಬಾತನಿಗೆ ಗಾಯಗಳಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಎರಡು ದಿನದ ಹಿಂದೆ ಮನೆ ಬಳಿ ಆಟೊ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಬೈಕ್ನಲ್ಲಿ ಬರುತ್ತಿದ್ದ ವೇಲು ಮತ್ತು ಗುಣನನ್ನು ವಿನೋದ್ ಅಡ್ಡಗಟ್ಟಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಚಾಕು ಇರಿದಿದ್ದ. ಗುಣ ಸಾವನ್ನಪ್ಪಿದ್ದು, ಗಾಯಗೊಂಡ ವೇಲುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಕೊಲೆ ಪ್ರಕರಣ ಒಂದರಲ್ಲಿ ಆರೋಪಿಗಳಾಗಿದ್ದರು.
ಈ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ವಿನೋದ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.















