ಮನೆ ಕಾನೂನು ಪತಿ ಹೂಡಿದ ವೈವಾಹಿಕ ದಾವೆ ವೆಚ್ಚಗಳನ್ನು ಆರಂಭದಲ್ಲಿಯೇ ನ್ಯಾಯಾಲಯಗಳು ಪತ್ನಿಗೆ ಕೊಡಿಸಬೇಕು: ಕಲ್ಕತ್ತಾ ಹೈಕೋರ್ಟ್

ಪತಿ ಹೂಡಿದ ವೈವಾಹಿಕ ದಾವೆ ವೆಚ್ಚಗಳನ್ನು ಆರಂಭದಲ್ಲಿಯೇ ನ್ಯಾಯಾಲಯಗಳು ಪತ್ನಿಗೆ ಕೊಡಿಸಬೇಕು: ಕಲ್ಕತ್ತಾ ಹೈಕೋರ್ಟ್

0

ತನ್ನ ವೈವಾಹಿಕ ಮನೆಯಿಂದ ಹೊರನಡೆದ ಅಥವಾ ಹೊರನಡೆಯುವ ಒತ್ತಾಯಕ್ಕೊಳಗಾದ ಹೆಂಡತಿಗೆ, ಪತಿ ತನ್ನ ವಿರುದ್ಧ ಹೂಡಿರುವ ವೈವಾಹಿಕ ಮೊಕದ್ದಮೆಯ ವೆಚ್ಚ ಭರಿಸುವಂತೆ ಸೂಚಿಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

Join Our Whatsapp Group

ಹೀಗಾಗಿ, ಪತಿಯು ಪತ್ನಿಯ ವಿರುದ್ಧ ವೈವಾಹಿಕ ಮೊಕದ್ದಮೆ ಹೂಡಿದಾಗ ನ್ಯಾಯಾಲಯಗಳು ಆರಂಭದಲ್ಲಿಯೇ ಆಕೆಗೆ ದಾವೆ ವೆಚ್ಚ ನೀಡಲು ಪತಿಗೆ ಆದೇಶಿಸಬೇಕು ಎಂದು ನ್ಯಾ. ಬಿಸ್ವರೂಪ್ ಚೌಧರಿ ಅವರಿದ್ದ ಏಕಸದಸ್ಯ ಪೀಠ ಮೇ 3 ರಂದು ಆದೇಶಿಸಿದೆ.

ವಿವಾದ ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಹೆಂಡತಿ ವೈವಾಹಿಕ ಮನೆ ತೊರೆದಾಗ ಕೆಲ ಸಂದರ್ಭಗಳಲ್ಲಿ ಖಿನ್ನತೆ ಮತ್ತು ಮಾನಸಿಕ ಅಸ್ಥಿರತೆ ಅನುಭವಿಸಿರುತ್ತಾಳೆ. ಅಂತಹ ಸ್ಥಿತಿಯಲ್ಲಿ, ಅವಳು ತನ್ನ ಪೋಷಕರ ಮನೆಗೆ ಹೋಗಿ ಜೀವನೋಪಾಯಕ್ಕಾಗಿ ತನ್ನ ಹೆತ್ತವರನ್ನು ಅವಲಂಬಿಸಬೇಕಾಗುತ್ತದೆ ಅಥವಾ ಅವಳು ಈಗಾಗಲೇ ಉದ್ಯೋಗದಲ್ಲಿ ಇಲ್ಲದಿದ್ದರೆ ತನ್ನ ಜೀವನೋಪಾಯಕ್ಕಾಗಿ ಯಾವುದಾದರೂ ಕೆಲಸ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ನ್ಯಾಯಾಲಯ ವಾಸ್ತವಕ್ಕೆ ಕನ್ನಡಿ ಹಿಡಿಯಿತು.

ಇಂತಹ ಸಂದರ್ಭದಲ್ಲಿ ಜೀವನಾಂಶ ಅರ್ಜಿ ನಿರ್ಧಾರವಾಗುವವರೆಗೆ ವ್ಯಾಜ್ಯ ವೆಚ್ಚವನ್ನು ಭರಿಸುವಂತೆ ಹೆಂಡತಿಯನ್ನು ಒತ್ತಾಯಿಸುವುದು ನ್ಯಾಯಸಮ್ಮತವಲ್ಲ. ವೈವಾಹಿಕ ಮನೆಯನ್ನು ತೊರೆದ ನಂತರ ಹೆಂಡತಿ ತನ್ನ ಜೀವನೋಪಾಯಕ್ಕಾಗಿ ಏನಾದರೂ ದುಡಿದು ಸ್ವಲ್ಪ ಮಟ್ಟಿಗೆ ಉಳಿತಾಯ ಮಾಡಬಹುದಾಗಿದ್ದರೂ  ಜೀವನಾಂಶ ಎಂಬುದು ಆಹಾರ, ಬಟ್ಟೆ, ವಸತಿ, ವೈದ್ಯಕೀಯ ವೆಚ್ಚ ಹಾಗೂ ಯೋಗ್ಯ ಜೀವನಕ್ಕಾಗಿ ಇತರ ಪ್ರಾಸಂಗಿಕ ವೆಚ್ಚಗಳನ್ನು ಒಳಗೊಂಡಿರುತ್ತದೆ ವಿನಾ ಇದರಲ್ಲಿ ವ್ಯಾಜ್ಯ ವೆಚ್ಚ ಸೇರಿಸುವಂತಿಲ್ಲ. ಅವಳು ಹೂಡಿರದ ಆದರೆ ಅವಳ ವಿರುದ್ಧ ಆಕೆಯ ಗಂಡ ದಾಖಲಿಸಿರುವ ಪ್ರಕರಣದಲ್ಲಿ ಆಕೆಯೇ ದಾವೆ ವೆಚ್ಚ ಪಾವತಿಸಬೇಕು ಎಂದು ಒತ್ತಾಯಿಸಬಾರದು ಎಂಬುದಾಗಿ ನ್ಯಾಯಾಲಯ ಕಿವಿಮಾತು ಹೇಳಿದೆ.

ಆಹಾರ, ಬಟ್ಟೆ ಮತ್ತು ವಸತಿಗಾಗಿ ಖರ್ಚು ಮಾಡಿದ ಹೆಂಡತಿ, ಭವಿಷ್ಯದ ಡೋಲಾಯಮಾನ ಸ್ಥಿತಿಯನ್ನು ಮನಗಂಡು ಸ್ವಲ್ಪ ಉಳಿತಾಯ ಮಾಡಲು ಮುಂದಾದರೂ ಅವಳ ಹೂಡಿರದ ವೈವಾಹಿಕ ಮೊಕದ್ದಮೆಯಲ್ಲಿ ದಾವೆ ವೆಚ್ಚವನ್ನು ಪಾವತಿಸಲು ಆಕೆಯನ್ನು ಹೊಣೆಗಾರಳನ್ನಾಗಿ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಮಹಿಳೆಯ ಘನತೆಯನ್ನು ಕಾಪಾಡಬೇಕಾಗಿದ್ದು, ಸ್ತ್ರೀಯರು ಅನಗತ್ಯವಾಗಿ ಖರ್ಚು ಮಾಡುವ ಮತ್ತು ಕಷ್ಟ ಎದುರಿಸುವ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಪತಿ ಹೂಡಿದ್ದ ವೈವಾಹಿಕ ಮೊಕದ್ದಮೆಯನ್ನು ಪ್ರಶ್ನಿಸಲು ತನ್ನ ವಿಚ್ಛೇದಿತ ಪತ್ನಿಗೆ ಮಾಸಿಕ ₹ 3,000 ದಾವೆ ವೆಚ್ಚ ಪಾವತಿಸಲು ಆದೇಶಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಹಿಂದಿನ ಲೇಖನಗದ್ದೆಗೆ ಉರುಳಿದ ಕೆಎಸ್‌ ಆರ್‌ ಟಿಸಿ ಬಸ್: ೪೦ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂದಿನ ಲೇಖನಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ