ಹುಣಸೂರು: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ಮನೆ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮನೆಯಲ್ಲಿ ಮಲಗಿದ್ದ ಮಹಿಳೆಗೆ ಗಾಯವಾಗಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.
ಹುಣಸೂರು- ಹೆಚ್.ಡಿ ಕೋಟೆ ರಸ್ತೆಯ ಬಾಚಹಳ್ಳಿ ಕ್ರಾಸ್ ನಲ್ಲಿ ಎಚ್ ಡಿ ಕೋಟೆ ಕಡೆಯಿಂದ ಭಾನುವಾರ ಮಧ್ಯರಾತ್ರಿ 12 ರ ಸಮಯದಲ್ಲಿ ಶುಂಠಿ ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ವಾಹನ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಾಚಹಳ್ಳಿ ಕ್ರಾಸ್ ನ ರಸ್ತೆ ಬದಿಯ ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಮನೆ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮನೆ ಮುಂದಿನ ಗೋಡೆ, ಮೇಲ್ಚಾವಣಿಯ ಶೀಟ್ ಹಾಗೂ ಹಂಚುಗಳು ಕುಸಿದು ಬಿದ್ದು ಮನೆಯೊಳಗೆ ಮಲಗಿದ್ದ ಪಾರ್ವತಿ ಎಂಬುವವರಿಗೆ ಪೆಟ್ಟಾಗಿದೆ. ಮನೆಯವರ ಕೂಗಾಟ ಕೇಳಿ ಅಕ್ಕಪಕ್ಕದವರು ದಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನದ ಹಿಂಬಾಗದ ಚಕ್ರ ಚರಂಡಿಯಲ್ಲಿ ಸಿಲುಕಿದ್ದರಿಂದಾಗಿ ಮುಂದೆ ಹೋಗದೆ ನಿಂತಿದ್ದು, ಮನೆಯೊಳಗಿದ್ದವರು ಬಚಾವ್ ಆಗಿದ್ದಾರೆ.
ಅಪಘಾತ ನಡೆಸಿದ ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ವಶಕ್ಕೆ ಪಡೆದಿದ್ದಾರೆ.















