ತೆಲಂಗಾಣ(Telangana): ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ವರದಿ ಮಾಡಲು ತೆರಳಿ, ನಾಪತ್ತೆಯಾಗಿದ್ದ ಪತ್ರಕರ್ತ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ಪತ್ರಕರ್ತ ಜಮೀರ್ (36) ತೆಲಂಗಾಣದ ಜಗ್ತಿಯಾಲ್ ಪಟ್ಟಣ ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಳೆಗೆ ನೀರಿನ ಮಟ್ಟವು ಹೆಚ್ಚಾಗಿದ್ದ ಹಿನ್ನೆಲೆ ಜಮೀರ್ ಪ್ರಯಾಣಿಸುತ್ತಿದ್ದ ಕಾರು ಪ್ರವಾಹದ ನೀರಿಗೆ ಜಾರಿ ಅವಘಡ ಸಂಭವಿದೆ ಎಂದು ರಾಯ್ಕಲ್ ಸಹಾಯಕ ಉಪ್ ಪೊಲೀಸ್ ಅಧಿಕಾರಿ ದೇವೇಂದರ್ ತಿಳಿಸಿದ್ದಾರೆ. ಜಾರಿ ಹೋಗಿದ್ದ ಕಾರನ್ನು ಗುರುವಾರ ಪ್ರವಾಹ ಪ್ರದೇಶದಿಂದ ಹೊರತರಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಶುಕ್ರವಾರ ಬೆಳಗ್ಗೆ ರಾಮಾಜಿಪೇಟೆ ಗ್ರಾಮದಲ್ಲಿ ಪತ್ರಕರ್ತನ ಶವ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಶಾಸಕ ಎಂ.ಸಂಜಯ್‌ಕುಮಾರ್, ಜಿಲ್ಲಾಧಿಕಾರಿ ಜಿ. ರವಿ, ಪೊಲೀಸ್ ವರಿಷ್ಠಾಧಿಕಾರಿ ಸಿಂಧು ಶರ್ಮಾ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ತನಿಖೆ ನಡೆಯುತ್ತಿದೆ. ಕೊಳೆತ ಸ್ಥಿತಿಯಲ್ಲಿದ್ದ ಶವದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.