ಮನೆ ಅಪರಾಧ ಕೊಲೆ ಆರೋಪಿಯಿಂದ ಮಹಿಳಾ ಪಿಎಸ್ ಐ ಮೇಲೆ ಮಚ್ಚಿನಿಂದ ಹಲ್ಲೆ

ಕೊಲೆ ಆರೋಪಿಯಿಂದ ಮಹಿಳಾ ಪಿಎಸ್ ಐ ಮೇಲೆ ಮಚ್ಚಿನಿಂದ ಹಲ್ಲೆ

0

ಕಲಬುರಗಿ(Kalburgi): ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಮಹಿಳಾ ಪಿಎಸ್ ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ‌ಕಂಬಾನೂರ ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ  ವಿಜಯಕುಮಾರ್ ಹಳ್ಳಿ ಎಂಬಾತನನ್ನು ಪಂಚನಾಮೆಗೆ ಕರೆದೊಯ್ದ ಸಂದರ್ಭದಲ್ಲಿ ಶಹಾಬಾದ್ ಪಿಎಸ್ಐ ಸುವರ್ಣಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಸುವರ್ಣಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಪೊಲೀಸರು ವಿಜಯಕುಮಾರನತ್ತ ಗುಂಡು ಹಾರಿಸಿದ್ದು, ಆತನಿಗೂ ಗಾಯಗಳಾಗಿವೆ. ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಗಿರೀಶ ಕಂಬಾನೂರ ಅವರನ್ನು ಎರಡು ತಲ್ವಾರ್‌ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎರಡು ತಂಡಗಳಲ್ಲಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು. ತಡರಾತ್ರಿ ಆರೋಪಿ ವಿಜಯಕುಮಾರ್ ಹಳ್ಳಿ ಹಾಗೂ ಇತರರನ್ನು ಬಂಧಿಸಲಾಗಿತ್ತು. ಶಹಾಬಾದ್ ಬಳಿಯ ತೊನಸನಹಳ್ಳಿ ಗ್ರಾಮದ ಬಳಿ ತಲ್ವಾರ್ ಹಾಗೂ ಬಂದೂಕು ಎಸೆದು ಹೋಗಿದ್ದ ಜಾಗದಲ್ಲಿ ಪಂಚನಾಮೆ ನಡೆಸಲು ಆರೋಪಿಗಳನ್ನು ಕರೆದೊಯ್ಯಲಾಗಿತ್ತು.

ಬಂದೂಕು ಎಸೆದಿದ್ದ ಸ್ಥಳವನ್ನು ತೋರಿಸುವ ನಟನೆ ಮಾಡಿದ ವಿಜಯಕುಮಾರ್ ಹಳ್ಳಿ ಪಿಎಸ್ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾ‌ನೆ. ತಕ್ಷಣ ಎಚ್ಚೆತ್ತ ಸಿಪಿಐ ಪ್ರಕಾಶ್ ಯಾತನೂರ ವಿಜಯಕುಮಾರ್‌ನತ್ತಲೂ ಗುಂಡು ಹಾರಿಸಿದರು. ಎಡಗಾಲಿಗೆ ಗಾಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ ಇಶಾ ಪಂತ್, ಸುವರ್ಣಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಏನನ್ನೂ ಹೇಳಿಲ್ಲ. ಆರೋಪಿ ವಿಜಯಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದರು.

ಹಿಂದಿನ ಲೇಖನನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿತ: ಐವರ ಸಾವು
ಮುಂದಿನ ಲೇಖನಮಳೆ ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಾವು