ಬೆಂಗಳೂರು(Bengaluru): ಭ್ರಷ್ಟಾಚಾರಕ್ಕೆ ಒಂದು ಜೀವ ಬಲಿ. ಆಡಳಿತರೂಢ ಸರ್ಕಾರ ತನ್ನ ಶ್ರವಣ ಶಕ್ತಿ ಕಳೆದುಕೊಂಡು ಜನರಿಂದ ತುಂಬ ದೂರ ಹೋಗಿಬಿಟ್ಟಿದೆ, ಅಧಿಕಾರ ದುಡ್ಡಿನ ಮದ ಹಾಗೂ ಭ್ರಷ್ಟಾಚಾರದಿಂದ ತನ್ನ ಕಾರ್ಯಕರ್ತನನ್ನ ಬಲಿ ಪಡೆದಿದೆ, ಉಳಿದವರ ಗತಿಯೇನು..? ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಆಪ್ ಮುಖಂಡ ಭಾಸ್ಕರ್ ರಾವ್ ಪ್ರಶ್ನಿಸಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ , ಯುವಕರು ಆಸೆಯಿಂದ ರಾಜಕೀಯ ವ್ಯಕ್ತಿಗಳ ಬಗ್ಗೆ ಬಹಳ ಗೌರವ ಇಟ್ಟುಕೊಂಡು ಕೆಲಸಗಳನ್ನು ಮಾಡಿ ಸರ್ಕಾರದ ಮಟ್ಟದಲ್ಲಿ ಸಹಾಯ ಆಗುತ್ತವೆ ಎಂದು ಎಲ್ಲ ಕಾರ್ಯಗಳನ್ನು ಮಾಡುತ್ತಾರೆ, ಅದರೆ ಈ ರೀತಿಯಾಗಿ ಹಿಂಸಿಸಿ, ಪ್ರಧಾನಮಂತ್ರಿಗಳ ಗಮನಕ್ಕೆ ತಂದರೂ ಸಹ ಆಡಳಿತರೂಢ ಸರ್ಕಾರ ಪ್ರಧಾನಿಗಳಿಗೂ ಕ್ಯಾರೆ ಅನ್ನದೇ, ಮುಖ್ಯಮಂತ್ರಿಗಳಗೂ ಅಗೌರವ ತೋರಿಸಿದೆ, ಪಕ್ಷಕ್ಕಾಗಿ ದುಡಿಯುವಂತಹ ಒಬ್ಬ ಅಮಾಯಕ ಯುವಕನ ಗತಿಯು ಈ ರೀತಿಯಾದರೆ ಇತರ ಜನಸಾಮಾನ್ಯರ ಗತಿ ಏನಾಗುತ್ತೇ…? ಎಂದು ಭಾಸ್ಕರ್ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ತುರ್ತಾಗಿ ಜನರಿಂದ ದೂರವಾಗಿರುವ ಸಚಿವರು ರಾಜೀನಾಮೆಯನ್ನು ಕೊಟ್ಟು ತೊಲಗಬೇಕು, ಇಲ್ಲದಿದ್ದರೆ ಸರ್ಕಾರಕ್ಕೆ ಏನಾದರೂ ಮರ್ಯಾದೆ ಇದ್ದರೇ ಅವರನ್ನು ವಜಾಗೊಳಿಸಬೇಕು ಹಾಗೂ ಬೇರೆ ಜನಸಾಮಾನ್ಯರ ಮೇಲೆ ಇಂತಹ ದೂರು ಬಂದರೆ ಯಾವ ರೀತಿ ಪೋಲಿಸರು ವರ್ತಿಸುತ್ತಾರೋ, ಅದೇ ರೀತಿ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿ ದಸ್ತಗಿರಿ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕದ ಮಹಾಜನತೆಯು ಇದೆಲ್ಲವನ್ನೂ ನೋಡುತ್ತಿದ್ದಾರೆ, ಸರಿಯಾದ ಸಮಯಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.