ಚಿಕ್ಕಮಗಳೂರು : ಗಂಡ ಸತ್ತು 10 ದಿನ ಕಳೆದು ಮೃತದೇಹ ಹುಳ ಬಿದ್ದರೂ ಮಾನಸಿಕ ಅಸ್ವಸ್ಥ ಪತ್ನಿ ಶವದ ಜೊತೆಯೇ ಇದ್ದ ಹೃದಯವಿದ್ರಾವಕ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದಲ್ಲಿ ನಡೆದಿದೆ.
ವಾಸನೆ ಬಂದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ನನ್ನ ಗಂಡ ನನಗೆ ಬೇಕು, ಅವರನ್ನ ಕರೆದೊಯ್ಯುಬೇಡಿ ಎಂದು ಮಹಿಳೆ ಅಂಗಲಾಚಿದ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿತ್ತು. ಬಣಕಲ್ ಗ್ರಾಮದ ನಿವಾಸಿ ಸಿರಿಲ್ ಮೋನಿಸ್ (77) 10 ದಿನಗಳ ಹಿಂದೆಯೇ ಅನಾರೋಗ್ಯದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು.
ಆದರೆ, ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ ಪತಿ ಸಾವನ್ನಪ್ಪಿರುವುದು ತಿಳಿಯದೆ ಹತ್ತು ದಿನಗಳ ಕಾಲ ಕೊಳೆತು ಹುಳ ಬಿದ್ದಿದ್ದ ಶವದ ಜೊತೆಯಲ್ಲೇ ವಾಸವಾಗಿದ್ದರು. ಸಿರಿಲ್ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗಲೆಲ್ಲಾ ಅಪ್ಪ ಚೆನ್ನಾಗಿದ್ದಾರೆ ಎಂದು ತಾಯಿ ಉತ್ತರಿಸುತ್ತಿದ್ದರು. ಇತ್ತೀಚೆಗಷ್ಟೇ ಊರಿಗೆ ಬಂದು ಅಪ್ಪನನ್ನ ಆಸ್ಪತ್ರೆಗೆ ತೋರಿಸಿ ಹೋಗಿದ್ದ ಮಗನಿಗೆ ತಂದೆಯ ಸಾವಿನ ಸುಳಿವೇ ಸಿಕ್ಕಿರಲಿಲ್ಲ.
ಪೊಲೀಸರು ಸ್ಥಳಕ್ಕೆ ಬಂದಾಗಲೂ ಮಾನಸಿಕ ಅಸ್ವಸ್ಥ ಪತ್ನಿ ನನ್ನ ಗಂಡ ನನಗೆ ಬೇಕು ಎಂದು ಪಟ್ಟು ಹಿಡಿದು ಶವವನ್ನು ಮುಟ್ಟಲು ಬಿಡದೆ ರೋದಿಸಿದ್ದು ಸ್ಥಳೀಯರ ಕಣ್ಣನ್ನ ತೇವಗೊಳಿಸಿತ್ತು. ಶವವು ಸಂಪೂರ್ಣವಾಗಿ ಕೊಳೆತು ಹುಳ ಹಿಡಿದಿದ್ದರಿಂದ ಸ್ಥಳೀಯರು ಹತ್ತಿರ ಹೋಗಲು ಹಿಂದೇಟು ಹಾಕುತ್ತಿದ್ದರು. ಸಮಾಜ ಸೇವಕ ಆರೀಫ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು.
ಅಂತಿಮವಾಗಿ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇತ್ತ ಸಂಜೆ ವೇಳೆಗೆ ಊರಿಗೆ ಬಂದ ಮಗನಿಗೆ ಅಪ್ಪನ ಮುಖ ನೋಡುವ ಭಾಗ್ಯವೂ ಸಿಗಲಿಲ್ಲ. ಅತ್ತ ಮಗಳು ವಿದೇಶದಿಂದ ಬರಲಾಗದ ಪರಿಸ್ಥಿತಿಯಲ್ಲಿದ್ದರು. ತಂದೆಯ ಸಾವಿನ ವಿಷಯ ತಿಳಿಯದ ತಾಯಿ ಮತ್ತು ತಂದೆಯ ಅಂತ್ಯಕಾಲದಲ್ಲಿ ಜೊತೆಗಿಲ್ಲದ ಮಕ್ಕಳ ಸ್ಥಿತಿ ಕಂಡು ಇಡೀ ಗ್ರಾಮವೇ ಕಂಬನಿ ಮಿಡಿದರು. ಆದರೆ, ಪತ್ನಿ ಮಾನಸಿಕ ಅಸ್ವಸ್ಥೆ. ಮಗ-ಮಗಳು ಇಬ್ಬರೂ ಬಂದಿಲ್ಲ. ಅಂತಿಮವಾಗಿ ಸ್ಥಳಿಯರೇ ಅಂತ್ಯ ಸಂಸ್ಕಾರ ನೇರವೇರಿಸಿದ್ದಾರೆ.















