ಮನೆ ಕಾನೂನು ವರದಕ್ಷಿಣೆ ಕಿರುಕುಳಕ್ಕೆ ಕಠಿಣ ಶಿಕ್ಷೆ ಕಾದಿದೆ ಎಂಬ ಸಂದೇಶ ರವಾನೆಯಾಗಬೇಕು: ಸುಪ್ರೀಂಕೋರ್ಟ್

ವರದಕ್ಷಿಣೆ ಕಿರುಕುಳಕ್ಕೆ ಕಠಿಣ ಶಿಕ್ಷೆ ಕಾದಿದೆ ಎಂಬ ಸಂದೇಶ ರವಾನೆಯಾಗಬೇಕು: ಸುಪ್ರೀಂಕೋರ್ಟ್

0

ವರದಕ್ಷಿಣೆ ಸಾವಿಗೆ ಕಠಿಣ ಶಿಕ್ಷೆ ಕಾದಿರುತ್ತದೆ ಎಂಬ ಸಂದೇಶ ವರದಕ್ಷಿಣೆ ಕಿರುಕುಳ ನೀಡುವ ವ್ಯಕ್ತಿಗಳಿಗೆ ಪ್ರಬಲವಾಗಿ ರವಾನೆಯಾಗಬೇಕು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಅತ್ತೆ-ಮಾವನಿಗೆ ವಿಧಿಸಿದ್ದ ಶಿಕ್ಷೆ ಕಡಿತಗೊಳಿಸಲು ನಿರಾಕರಿಸಿದೆ.

ತಮ್ಮ ಇಳಿ ವಯಸ್ಸನ್ನಾದರೂ ಪರಿಗಣಿಸಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿ ಜಾರ್ಖಂಡ್ ರಾಜ್ಯದ ಅಜೋಲಾ ದೇವಿ ಹಾಗೂ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಆರ್ ಶಾ ಹಾಗೂ ನ್ಯಾ. ಬಿ.ವಿ ನಾಗರತ್ನ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಲಯದ ತನ್ನ ತೀರ್ಪಿನಲ್ಲಿ, ವರದಕ್ಷಿಣೆ ಕಿರುಕುಳ ಮತ್ತು ಸಾವುಗಳನ್ನು ತಡೆಯುವ ಉದ್ದೇಶದಿಂದಲೇ ಐಪಿಸಿ ಸೆಕ್ಷನ್ 304(ಬಿ) ಹಾಗೂ ವರದಕ್ಷಿಣೆ ನಿಷೇಧ ಅಧಿನಿಯಮವನ್ನು ಶಾಸಕಾಂಗ ರೂಪಿಸಿದೆ. ಸೆಕ್ಷನ್ 304(ಬಿ) ಬರೀ ವ್ಯಕ್ತಿ ವಿರುದ್ಧದ ಅಪರಾಧವಲ್ಲ. ಸಮಾಜದ ವಿರುದ್ಧದ ಅಪರಾಧ.

ಹೀಗಾಗಿ, ವರದಕ್ಷಿಣೆ ಕಿರುಕುಳ ನೀಡುವ ಮತ್ತು ಸಾವಿಗೆ ಕಾರಣವಾಗುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಕಾದಿದೆ ಎಂಬ ಬಲವಾದ ಸಂದೇಶವನ್ನು ರವಾನಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಸೊಸೆ ಸಾವಿಗೆ ಕಾರಣರಾಗಿದ್ದ ಆರೋಪಿಗಳಾದ ಅತ್ತೆ ಮಾವನಿಗೆ ಜಾರ್ಖಂಡ್ ಹೈಕೋರ್ಟ್ ವಿಧಿಸಿರುವ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಸೂಕ್ತವಾಗಿದೆ ಎಂದಿದೆ.

ವರದಕ್ಷಿಣೆ ಸಾವು ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ತಮಗೆ ವಿಧಿಸಿರುವ ಶಿಕ್ಷೆಯನ್ನು ತಮ್ಮ ಇಳಿವಯಸ್ಸನ್ನು ಪರಿಗಣಿಸಿಯಾದರೂ ಕಡಿತಗೊಳಿಸಬೇಕು ಎಂದು ಕೋರಿ ಅಜೋಲಾದೇವಿ ಹಾಗೂ ಪತಿ ಸುಪ್ರೀಂ ಮೊರೆ ಹೋಗಿದ್ದರು. ಮನವಿ ಪರಿಗಣಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಸೊಸೆ ಮದುವೆಯಾಗಿ ಬಂದ ವರ್ಷದೊಳಗೇ ಸಾವನ್ನಪ್ಪಿದ್ದಾಳೆ. ಆರೋಪಿಗಳು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು ವಿಚಾರಣೆ ವೇಳೆ ಸಾಬೀತಾಗಿದೆ.

ವರದಕ್ಷಿಣೆ ಕಿರುಕುಳದಿಂದಾದ ಸಾವಿಗೆ ಕನಿಷ್ಟ 7ರಿಂದ ಗರಿಷ್ಠ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ. ಹೀಗಾಗಿ, ವಿಚಾರಣಾ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ಕ್ರಮ ಹಾಗೂ ಅದನ್ನು ಎತ್ತಿಹಿಡಿದಿರುವ ಹೈಕೋರ್ಟ್ ಆದೇಶ ಸರಿಯಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆರೋಪಿಗಳ ಮನವಿಯನ್ನು ತಿರಸ್ಕರಿಸಿದೆ.

ಹಿಂದಿನ ಲೇಖನಹಾವೇರಿ: ಒಂದೇ ಮನೆಯ ಮೂವರು ಆತ್ಮಹತ್ಯೆಗೆ ಶರಣು
ಮುಂದಿನ ಲೇಖನಸಿಎಟಿ ಪರೀಕ್ಷಾ ಫಲಿತಾಂಶ: ಪುರುಷ ಅಭ್ಯರ್ಥಿಗಳ ಮೇಲುಗೈ