ಅಮೇರಿಕಾದ ಅನ್ವೇಷಕ ವಿಲಿಯಂ ಕಿರ್ಡಿ ಅನ್ವೇಷಣೆಯೊಂದನ್ನು ಮುಗಿಸಿ ವಾಪಸ್ಸಾಗುತ್ತಿದ್ದನು. ಆತ ಹಡ್ಸನ್ ಬೇ ಬಳಿ ಬಂದಾಗ ಅಲ್ಲೊಬ್ಬ ರೆಡ್ ಇಂಡಿಯನ್ ಮಹಿಳೆ ರಕ್ತಸಿಕ್ತ ಗಾಯಗಳಿಂದ ಸುಸ್ತಾಗಿ ನಲದ ಮೇಲೆ ಮಲಗಿದ್ದಳು. ಗಾಯಗಳಿಗೆ ಬ್ಯಾಂಡೆಡ್ ಕಟ್ಟಿ ಆರೈಕೆ ಮಾಡಿದ ಬಳಿಕ ಪೂರ್ವಪರಗಳ ಬಗ್ಗೆ ವಿಚಾರಿಸಿದನು.
ಆ ಮಹಿಳೆ ತನ್ನ ಬಳಗವನ್ನು ಬಿಟ್ಟು ನೂರಾರು ಮೈಲಿಗಳ ದೂರದಿಂದ ಇಲ್ಲಿಗೆ ಬಂದಿದ್ದಳು. ಅವಳ ಬುಡಕಟ್ಟು ಮತ್ತೊಂದು ಗುಂಪಿನೊಂದಿಗೆ ಯುದ್ಧದಲ್ಲಿ ನಿರತರಾಗಿದ್ದರಿಂದ ಆಕೆ ವಲಸೆ ಬರಬೇಕಾದ ಪ್ರಮೇಯ ಉಂಟಾಯಿತು. ಹೀಗಾಗಿ ಆಕೆ ಬಳಲಿ ಸುಸ್ತಾಗಿ ತನ್ನ ಮಗನೊಂದಿಗೆ ಉಳಿಯಬೇಕಾದ ಪರಿಸ್ಥಿತಿ ತಲೆದೂರಿತು.
“ಈ ಗಾಯಗಳು ಹೇಗೆ ಆದವು ?” ಅನ್ವೇಷಕ ಕೇಳಿದನು. “ನೀನು ಯುದ್ಧದಲ್ಲಿ ಗಾಯಗೊಂಡಿರುವ ಬಗ್ಗೆ ಅನುಮಾನ ಪಡಬೇಕಿಲ್ಲ ಅಲ್ಲವೇ ?”ಎಂದು ಪ್ರಶ್ನಿಸಿದನು.
“ಓಹ್, ಇಲ್ಲ,” ಆಕೆ ಬಳಲಿಕೆಯ ನಗುವಿನೊಂದಿಗೆ ತಿಳಿಸಿದಳು. “ಈ ಗಾಯಗಳು ನಾನೇ ಖುದ್ದಾಗಿ ಮಾಡಿಕೊಂಡಿದ್ದು” ಎಂದು ಆಕೆ ಉತ್ತರಿಸಿದಳು. ನಂತರ ಆಕೆ ತನ್ನ ಪಕ್ಕದಲ್ಲಿದ್ದ ಮೀನಿನ ಗಾಳದತ್ತ ನೋಡುತ್ತಾ, “ನೀವು ಬರುವ ಮುನ್ನ ಈ ಗಾಳಕ್ಕೆ ಸಿಕ್ಕಿಸಲೆಂದು ನನ್ನ ತೋಳಿನಿಂದ ಈ ಮಾಂಸವನ್ನು ಕಿತ್ತುಕೊಂಡೆ” ಎಂದು ವಿವರಿಸಿದರು.
ಇದನ್ನು ಕೇಳಿ ಅನ್ವೇಷಕ ತಬ್ಬಿಬ್ಬದನಾದರೂ ಆ ಮಹಿಳೆ ತನ್ನ ಕಥೆಯನ್ನು ಮುಂದುವರಿಸಿದಳು.
ಪ್ರಶ್ನೆಗಳು :-
1.ಆಕೆ ಮುಂದೆ ಏನು ಹೇಳಿದಳು ?
2.ಈ ಕಥೆಯ ಪರಿಣಾಮವೇನು?
ಉತ್ತರಗಳು :-
1.ನಾನು ಕಳೆದ ಮೂರು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದೇನೆ ನನ್ನ ಎದೆಯಲ್ಲಿ ಹಾಲು ಸಂಪೂರ್ಣವಾಗಿ ಬತ್ತಿ ಹೋಗಿದೆ ನನ್ನ ಮಗು ಸಾಯುವ ಸ್ಥಿತಿ ತಲುಪುತ್ತಿತ್ತು. ನಾನು ಬೇರೆ ಏನು ತಾನೆ ಮಾಡಲು ಸಾಧ್ಯವಿತ್ತು ? ನಾನು ನನ್ನ ಶರೀರದ ಸ್ವಲ್ಪ ಮಾಂಸವನ್ನು ಕಿತ್ತು ಈ ಗಾಳಕ್ಕೆ ಸಿಕ್ಕಿಸಿದೆ. ಆದ್ದರಿಂದ ಅಷ್ಟಿಷ್ಟು ಮೀನು ಹಿಡಿದು ತಿಂದು ನಾನು ನನ್ನ ಕಂದಮ್ಮನಿಗೆ ಹಾಲುಣಿಸಲು ಶಕ್ತಿ ಗಳಿಸಬಹುದೆಂದು ಹೀಗೆ ಮಾಡಿದೆ.”
2. ಬಹುತೇಕ ಎಲ್ಲಾ ತಾಯಂದಿರು ನಮ್ಮ ಈ ಕಥೆಯ ಮಾತೆಯಂತೆಯೇ ಇರುತ್ತಾರೆ. ಅವರು ತಮ್ಮ ಮಕ್ಕಳ ಸಂರಕ್ಷಣೆಗೆ ಏನನ್ನೇ ಮಾಡಲು ಸಿದ್ದರಾಗುತ್ತಾರೆ. ನಾವು ನಮ್ಮ ಜೀವನವಿಡೀ ಸೇವೆ ಮಾಡಿದರೂ ತಾಯಂದಿರ ಆ ತ್ಯಾಗವನ್ನು ಸರಿದೂಗಿಸಲು ಸಾಧ್ಯವಿಲ್ಲ.